
big relief For basavaraj bommai fir in two cases cancelled
ವಕ್ಫ್ ವಿಚಾರದಲ್ಲಿ ಪ್ರಚೋದನಕಾರಿ ಹೇಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ವಿರುದ್ಧದ ಎರಡು ಪ್ರಕರಣಗಳನ್ನು ರದ್ದುಪಡಿಸಿ ಹೈಕೋರ್ಟ್ ಏಕಸದಸ್ಯ ಪೀಠ ಶುಕ್ರವಾರ ಆದೇಶ ಹೊರಡಿಸಿದೆ. ಬಸವರಾಜ ಬೊಮ್ಮಾಯಿ ಹೇಳಿದ್ದ ಹೇಳಿಕೆಯಲ್ಲಿ ಪ್ರಚೋದನಕಾರಿ ಅಂಶಗಳಿಲ್ಲವೆಂದು ಹಿರಿಯ ವಕೀಲ ಪ್ರಭುಲಿಂಗ್ ನಾವದಗಿ ವಾದ ಮಂಡಿಸಿದ್ದರು.
ಇದೀಗ ಪ್ರಕರಣ ರದ್ದುಪಡಿಸಿ ನ್ಯಾ.ಎಸ್.ಆರ್.ಕೃಷ್ಣಕುಮಾರ್ ಅವರಿದ್ದ ಪೀಠ ಆದೇಶಿಸಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾವೇರಿ ಜಿಲ್ಲೆಯ ಸವಣೂರು ಹಾಗೂ ಶಿಗ್ಗಾಂವಿ ಪೊಲೀಸ್ ಠಾಣೆಗಳಲ್ಲಿ 2024ರಲ್ಲಿ ಪ್ರಕರಣಗಳು ದಾಖಲಾಗಿದ್ದವು.
ಬಳಿಕ ಕೇಸ್ ರದ್ದು ಕೋರಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ನಿನ್ನೆ ಅರ್ಜಿ ವಿಚಾರಣೆ ಮಾಡಿದ ಹೈಕೋರ್ಟ್ ಪ್ರಕರಣಗಳನ್ನು ರದ್ದುಗೊಳಿಸಿದೆ. ಆ ಮೂಲಕ ಬಸವರಾಜ ಬೊಮ್ಮಾಯಿಗೆ ಬಿಗ್ ರಿಲೀಫ್ ಸಿಕ್ಕಿದೆ.
ವಕ್ಫ್ ಬೋರ್ಡ್ ಆಸ್ತಿ ವಿವಾದ ಕರ್ನಾಟಕದಾದ್ಯಂತ ತೀವ್ರ ಸದ್ದು ಮಾಡಿತ್ತು. ರೈತರು ಮತ್ತು ದೇವಾಲಯಗಳ ಆಸ್ತಿಗಳನ್ನು ಕಬಳಿಸಿದ್ದಕ್ಕಾಗಿ ವಕ್ಫ್ ಮಂಡಳಿ ಮತ್ತು ರಾಜ್ಯ ಸರ್ಕಾರದ ವಿರುದ್ಧ 2024 ರ ನವೆಂಬರ್ನಲ್ಲಿ ಬಿಜೆಪಿ ಪ್ರತಿಭಟನೆ ಮಾಡಿತ್ತು.
ಈ ವೇಳೆ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ವಕ್ಫ್ ಮಂಡಳಿ ರೈತರ ಭೂಮಿಯನ್ನು ಕಬಳಿಸುತ್ತಿದೆ. ಸವಣೂರಿನಲ್ಲಿ ನಿಂತು ಎಲ್ಲಿಗೆ ಕಲ್ಲು ಎಸೆದರೂ ಅದು ವಕ್ಫ್ ಭೂಮಿ ಮೇಲೆ ಬೀಳುತ್ತದೆ ಎಂದು ಹೇಳಿದ್ದರು. ಬಳಿಕ ಇದು ತೀವ್ರ ಚರ್ಚೆಗೆ ಗ್ರಾಸವಾಗಿದ್ದು, ಪ್ರಚೋದನಾಕಾರಿ ಭಾಷಣ ಮಾಡಿದ್ದಾರೆ ಎಂದು ಆರೋಪಿಸಲಾಗಿತ್ತು.
ಬಳಿಕ ಭಾರತೀಯ ನ್ಯಾಯ ಸಂಹಿತಾ, 2023 (ಬಿಎನ್ಎಸ್) ಸೆಕ್ಷನ್ 196(1)(ಎ) (ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು) ಅಡಿಯಲ್ಲಿ ಬಸವರಾಜ ಬೊಮ್ಮಾಯಿ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ನಂತರ ಪ್ರಕರಣಗಳನ್ನು ರದ್ದು ಕೋರಿ ಬೊಮ್ಮಾಯಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು.