ರಾಗಿ ಹೆಚ್ಚು ಆರೋಗ್ಯಕರ ಆಹಾರ ಧಾನ್ಯ ಎಂಬುದು ಎಲ್ಲರಿಗೂ ತಿಳಿದೆ ಇದೆ. ಎಲ್ಲಾ ಕಾಲದಲ್ಲಿಯೂ ಸಲ್ಲುವ ಪದಾರ್ಥಗಳಲ್ಲಿ ಇದು ಒಂದು. ದೇಹಕ್ಕೆ ತಂಪು ನೀಡುವ, ಆರೋಗ್ಯವನ್ನು ಹೆಚ್ಚಿಸುವ ಈ ರಾಗಿ ಪೋಷಕಾಂಶಗಳ ಖನಿಜ. ರಾಗಿಯನ್ನು ಮುದ್ದೆ, ದೋಸೆ, ರೊಟ್ಟಿ, ಉಪ್ಪಿಟ್ಟು, ಅಂಬಲಿ, ಚಪಾತಿ, ರಾಗಿ ಹಾಲುಬಾಯಿ, ಹಲ್ವಾ ರೂಪದಲ್ಲಿ ಬಳಸಲಾಗುತ್ತಿದೆ. ಇದರ ಜೊತೆಗೆ ರಾಗಿ ಸೂಪ್ ಕೂಡ ಹೆಚ್ಚು ಖ್ಯಾತಿ ಪಡೆಯುತ್ತಿದೆ.
ಸೂಪ್ ಯಾವಾಗಲೂ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ರಾಗಿ ಸೂಪ್ ಅನ್ನು ರಾಗಿ ಹಿಟ್ಟು, ಬೆಣ್ಣೆ, ಹಸಿರು ಮೆಣಸಿನಕಾಯಿ, ಶುಂಠಿ, ಬೆಳ್ಳುಳ್ಳಿ, ಉಪ್ಪು, ಮೆಣಸು, ಮೊಸರು ಮತ್ತು ಮಿಶ್ರ ತರಕಾರಿಗಳನ್ನು ಬಳಸಿ ತಯಾರಿಸಲಾಗುತ್ತದೆ. ರಾಗಿ ಸೂಪ್ ತುಂಬಾ ಟೇಸ್ಟಿ ಮತ್ತು ಆರೋಗ್ಯಕರ ರೆಸಿಪಿಯಾಗಿದೆ. ಟೊಮೆಟೊ, ಪಾಲಾಕ್, ಚಿಕನ್, ಮಟನ್ ಸೇರಿ ಹಲವು ಪದಾರ್ಥಗಳಿಂದ ಸೂಪ್ ತಯಾರಿಸಲಾಗುತ್ತದೆ. ಈ ರಾಗಿ ಸೂಪ್ ರೆಸಿಪಿಯನ್ನು ಒಮ್ಮೆ ಟ್ರೈ ಮಾಡಿ.
ಆರೋಗ್ಯಕರ ರಾಗಿ ತಿನಿಸುಗಳು
ರಾಗಿ ಧಾನ್ಯ ಹಲವಾರು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ರಾಗಿ ರೊಟ್ಟಿ, ರಾಗಿ ಮುದ್ದೆ, ರಾಗಿ ಅಂಬಲಿ ಸೇರಿದಂತೆ ಹಲವು ಪದಾರ್ಥಗಳನ್ನು ತಯಾರಿಸಬಹುದಾಗಿದೆ. ರಾಗಿ ಸೂಪ್ ರೆಸಿಪಿಯಲ್ಲಿ ಬೀನ್ಸ್, ಕ್ಯಾರೆಟ್, ಸ್ವೀಟ್ ಕಾರ್ನ್ ಮತ್ತು ಹೂಕೋಸು, ಟೊಮೆಟೋ, ಹಸಿ ಬಟಾಣಿ ಸೇರಿದಂತೆ ಹಲವು ತರಕಾರಿಗಳನ್ನು ಬಳಸಬಹುದು. ಬಳಸಿದ್ದೇನೆ.
ರಾಗಿ ಸೂಪ್ ಮಾಡಲು ಬೇಕಾದ ಪದಾರ್ಥಗಳು
1. ಕಾಲು ಕಪ್ ರಾಗಿ ಹಿಟ್ಟು
2. ಒಂದು ಕಪ್ ಸಣ್ಣದಾಗಿ ಹೆಚ್ಚಿದ ತರಕಾರಿಗಳು
3. ಅರ್ಧ ಈರುಳ್ಳಿ ಸಣ್ಣದಾಗಿ ಹೆಚ್ಚಿದ
4. ಒಂದು ಟೀಸ್ಪೂನ್ ಸಣ್ಣದಾಗಿ ಹೆಚ್ಚಿದ ಹಸಿ ಮೆಣಸಿನಕಾಯಿ
5. ಒಂದು ಟೀಸ್ಪೂನ್ ಸಣ್ಣದಾಗಿ ಹೆಚ್ಚಿದ ಶುಂಠಿ
6. ಒಂದು ಟೀಸ್ಪೂನ್ ಸಣ್ಣದಾಗಿ ಹೆಚ್ಚಿದ ಬೆಳ್ಳುಳ್ಳಿ
7. ಒಂದು ಟೀಸ್ಪೂನ್ ಬೆಣ್ಣೆ
8. ಅರ್ಧ ಟೀಸ್ಪೂನ್ ಕರಿಮೆಣಸು 9. ರುಚಿಗೆ ತಕ್ಕಂತೆ ಉಪ್ಪು
ರಾಗಿ ಸೂಪ್ ತಯಾರಿಸುವ ವಿಧಾನ
ಒಂದು ಬಟ್ಟಲಿನಲ್ಲಿ ರಾಗಿ ಹಿಟ್ಟನ್ನು ತೆಗೆದುಕೊಂಡು ಎರಡು ಪಟ್ಟು ನೀರು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ ಅದನ್ನು ಕೆಲ ಹೊತ್ತು ನೆನೆಯಲು ಇಡಿ. ಒಂದು ದಪ್ಪ ತಳದ ಪಾತ್ರೆಯನ್ನು ತೆಗೆದುಕೊಂಡು ಅದರಲ್ಲಿ ಬೆಣ್ಣೆಯನ್ನು ಬಿಸಿ ಮಾಡಿ. ಸಣ್ಣಗೆ ಕತ್ತರಿಸಿದ ಹಸಿರು ಮೆಣಸಿನಕಾಯಿ, ಶುಂಠಿ ಮತ್ತು ಬೆಳ್ಳುಳ್ಳಿ ಸೇರಿಸಿ. ಸ್ವಲ್ಪ ಸಮಯದವರೆಗೆ ಅವುಗಳನ್ನು ಫ್ರೈ ಮಾಡಿ.
ಇದಕ್ಕೆ ಕತ್ತರಿಸಿದ ತರಕಾರಿಗಳನ್ನು ಸೇರಿಸಿ ಮಧ್ಯಮ ಉರಿಯಲ್ಲಿ ಹುರಿಯಲು ಪ್ರಾರಂಭಿಸಿ. ಬೀನ್ಸ್, ಕ್ಯಾರೆಟ್, ಸ್ವೀಟ್ ಕಾರ್ನ್ ಮತ್ತು ಹೂಕೋಸು, ಹಸಿ ಬಟಾಣಿ ಸೇರಿಸಿ, ಕತ್ತರಿಸಿದ ಈರುಳ್ಳಿಯನ್ನು ಸೇರಿಸಿ ಮತ್ತು ತರಕಾರಿಗಳು ಅರ್ಧ ಬೇಯುವವರೆಗೂ ಹುರಿಯಿರಿ. ಇದಕ್ಕೆ ಅರ್ಧ ಕಪ್ ನೀರು ಸೇರಿಸಿ ಮತ್ತು ತರಕಾರಿಗಳನ್ನು ಒಂದು ನಿಮಿಷ ಬೇಯಿಸಲು ಬಿಡಿ. ತರಕಾರಿಗಳನ್ನು ಬೇಯಿಸುವಾಗ ಒಂದು ಚಮಚ ಉಪ್ಪು ಸೇರಿಸಿ.
ಇದಕ್ಕೆ ರಾಗಿ ಹಿಟ್ಟು ಮತ್ತು ಅರ್ಧ ಕಪ್ ನೀರು ಸೇರಿಸಿ. ಬೆರೆಸಿ ಮತ್ತು ಒಂದು ನಿಮಿಷ ಕುದಿಸಿ. ಅಗತ್ಯವಿರುವಂತೆ ನೀರನ್ನು ಸೇರಿಸಿ , ಪ್ರಮಾಣವನ್ನು ಸರಿ ಮಾಡಿ. ಬಳಿಕ ಸ್ಟವ್ ಆಫ್ ಮಾಡಿ. ಬಿಸಿ ಕಡಿಮೆಯಾಗುವವರೆಗೆ ಕಾಯಿರಿ ಇದಕ್ಕೆ ಕಾಲು ಕಪ್ ಮೊಸರು ಸೇರಿಸಿ. ರುಚಿಗೆ ತಕ್ಕಂತೆ ಉಪ್ಪು ಮತ್ತು ಮೆಣಸು ಪುಡಿಯನ್ನು ಸೇರಿಸಿ, ಬಡಿಸಿ. ಈಗ ಬಿಸಿ ಬಿಸಿಯಾದ ರಾಗಿ ಸೂಪ್ ಟೆಸ್ಟ್ ಮಾಡಲು ಸಿದ್ಧ.