
Ashwaveega News 24×7 ಸೆ. 02: ಸಚಿವ ಸ್ಥಾನದಿಂದ ವಜಾಗೊಂಡಿರುವ ಕೆ.ಎನ್. ರಾಜಣ್ಣ ಕಾಂಗ್ರೆಸ್ ತೊರೆಯಲಿದ್ದಾರೆ ಅನ್ನೋ ಚರ್ಚೆ ಕಾಂಗ್ರೆಸ್ ವಲಯದಲ್ಲೇ ಭಾರೀ ಜೋರಾಗಿ ನಡೀತಿದೆ.. ಇದರ ನಡುವೆಯೇ ಹೈಕಮಾಂಡ್ ವಿರುದ್ಧ ಅಸಮಾಧಾನಗೊಂಡಿರೋ ಮಾಜಿ ಸಚಿವ ರಾಜಣ್ಣ ಬಿಜೆಪಿ ಸೇರಲಿದ್ದಾರೆ ಅನ್ನೋ ಹೊಸ ಸುದ್ದಿ ಕೂಡ ಹರಿದಾಡ್ತಿದೆ..
ತಮ್ಮದೇ ಪಕ್ಷದ ವರಿಷ್ಠರ ವಿರುದ್ಧ ಮಾತನಾಡಿದ್ದ ರಾಜಣ್ಣ ವಿರುದ್ಧ ಕೆಂಡವಾಗಿದ್ದ ʼಕೈʼ ಕಮಾಂಡ್ ಕ್ಯಾಬಿನೆಟ್ನಿಂದ ಗೇಟ್ ಪಾಸ್ ನೀಡಿತ್ತು.. ಮಾತಿನಿಂದ್ಲೇ ಮಂತ್ರಿಗಿರಿ ಕಳೆದುಕೊಂಡ ರಾಜಣ್ಣ, ಪಕ್ಷದ ನಿರ್ಧಾರಕ್ಕೆ ಸಿಡಿಮಿಡಿಯಾಗಿ, ಇದು ನನ್ನ ವಿರುದ್ಧ ಷಡ್ಯಂತ್ರ ಎಂದು ಗುಡುಗಿದ್ದರು.. ಇದಾದ್ಮೇಲೆ ಮತ್ತೆ ನಾಯಕರು, ವಾಲ್ಮೀಕಿ ಸಮುದಾಯದ ಸ್ವಾಮೀಜಿಗಳು ರಾಜಣ್ಣ ಪರವಾಗಿ ಬ್ಯಾಟ್ ಬೀಸಿದ್ದರು. ಆದರೆ ಇದೀಗ ರಾಜಣ್ಣ ಪಕ್ಷದಿಂದಲೇ ಹೊರ ಹೋಗ್ತಾರೆ ಅನ್ನೊ ಸುದ್ದಿ ಬಲವಾಗೇ ಕೇಳಿ ಬರ್ತಿದೆ.
ಸಚಿವ ಸ್ಥಾನ ಕಳೆದುಕೊಂಡಿರೋ ರಾಜಣ್ಣ ಕಾಂಗ್ರೆಸ್ ತೊರೆಯುವ ನಿರ್ಧಾರ ಮಾಡಿದ್ದು, ಬಿಜೆಪಿ ಸೇರಲಿದ್ದಾರಂತೆ.. ಬಿಜೆಪಿಗೆ ಅಪ್ಲಿಕೇಷನ್ ಹಾಕಿರೋ ರಾಜಣ್ಣ, ಕಾಂಗ್ರೆಸ್ ಪಕ್ಷದಿಂದ ಒಂದು ಕಾಲು ಹೊರಗಿಟ್ಕೊಂಡು ಕಾಯ್ತಿದ್ದಾರಂತೆ.. ಕಾಂಗ್ರೆಸ್ ಅಧಿಕಾರದಲ್ಲಿರೋ ಕಾರಣದಿಂದ ಸುಮ್ಮನೇ ಇದ್ದಾರಂತೆ. ಹೀಗಂಥ ಸ್ವತಃ ಕಾಂಗ್ರೆಸ್ ಶಾಸಕ ಬಾಲಕೃಷ್ಣ ಬಾಂಬ್ ಸಿಡಿಸಿದ್ದಾರೆ. ಅಲ್ಲದೇ ಬಿಜೆಪಿಗರ ಸಂಪರ್ಕದಲ್ಲಿದ್ದಾರೆ ಅಂತಾ ಸ್ಫೋಟಕ ಹೇಳಿಕೆ ನೀಡಿದ್ದಾರೆ.
ಬಾಲಕೃಷ್ಣರ ಈ ಹೇಳಿಕೆ ರಾಜ್ಯ ರಾಜಕೀಯದಲ್ಲಿ ಸೆಪ್ಟೆಂಬರ್ ಕ್ರಾಂತಿಯ ಸುದ್ದಿಗೆ ರೆಕ್ಕೆಪುಕ್ಕ ಬಂದಂತಾಗಿದೆ. ಸ್ವತಃ ರಾಜಣ್ಣ ಅವರೇ ಸೆಪ್ಟೆಂಬರ್ ಕ್ರಾಂತಿ ಹೇಳಿಕೆ ನೀಡಿ, ರಾಜ್ಯ ರಾಜಕೀಯದಲ್ಲಿ ತಲ್ಲಣ ಸೃಷ್ಟಿಸಿದ್ದರು. ಸೆಪ್ಟೆಂಬರ್ ಕ್ರಾಂತಿ ಎಂದಿದ್ದ ರಾಜಣ್ಣಗೆ ಕಾಂಗ್ರೆಸ್ ಹೈಕಮಾಂಡ್ ಆಗಸ್ಟ್ನಲ್ಲೇ ಶಾಕ್ ಕೊಟ್ಟಿತ್ತು. ರಾಜಣ್ಣ ಸಚಿವ ಸ್ಥಾನದಿಂದ ಉಚ್ಚಾಟನೆಗೊಂಡ ಬೆನ್ನಲ್ಲೇ ಬಿಜೆಪಿ ನಾಯಕ ಶ್ರೀರಾಮುಲು, ರಾಜಣ್ಣ ಅವರನ್ನು ಬಹಿರಂಗವಾಗಿಯೇ ಬಿಜೆಪಿಗೆ ಆಹ್ವಾನಿಸಿದ್ದರು.
ನಿಮ್ಮ ಜೊತೆಗೆ ವಾಲ್ಮೀಕಿ ಸಮುದಾಯವಿದೆ. ನೀವು ಬಿಜೆಪಿಗೆ ಬನ್ನಿ, ನಿಮಗೆ ಒಳ್ಳೇ ಸ್ಥಾನಮಾನ ಕೊಡ್ತೀವಿ ಅಂತಾ ಓಪನ್ ಆಫರ್ ಕೊಟ್ಟಿದ್ರು. ಆದ್ರೆ ಶ್ರೀರಾಮುಲು ವಿಶ್ವಾಸದಿಂದ ಕರೆದಿದ್ದಾರೆ. ಅವರನ್ನೇ ಬೇಕಾದ್ರೆ ನಾನು ಕಾಂಗ್ರೆಸ್ಗೆ ಕರ್ಕೊಂಡು ಬರ್ತೀನಿ ಅಂತಾ ನಯವಾಗೇ ತಿರುಗೇಟು ಕೊಟ್ಟಿದ್ರು ಕೆ.ಎನ್.ರಾಜಣ್ಣ..
ಇನ್ನೂ ಬಾಲಕೃಷ್ಣ ಬಾಂಬ್ ಬಗ್ಗೆ ಪ್ರತಿಕ್ರಿಯಿಸಿರೋ ಎಂಎಲ್ಸಿ ಸಿ.ಟಿ.ರವಿ, ರಾಜಣ್ಣ, ಬಾಲಕೃಷ್ಣ ಸೇರಿದಂತೆ ಹಲವರು ಸೈದ್ದಾಂತಿಕ ವಿಚಾರದಿಂದ ಬೇರೆ ಬೇರೆ ಇದ್ದೇವೆ. ನಾವೆಲ್ಲರೂ ಒಂದೇ ಎಂದಿದ್ದಾರೆ. ಅಲ್ಲದೇ, ಬಾಲಕೃಷ್ಣ ಮೂಲ ಬಿಜೆಪಿಗರು. ರಾಜಣ್ಣ ತಮ್ಮ ಅಸಮಾಧಾನ ಹೊರಹಾಕಿದ್ದಾರೆ. ನಮ್ಮ ನಡುವೆ ಒಳ್ಳೆಯ ಸಂಪರ್ಕ ಇದೆ ಎಂದು ಹೇಳಿದ್ದಾರೆ.
ಕೆ.ಎನ್.ರಾಜಣ್ಣ ಪುತ್ರ ರಾಜೇಂದ್ರ ಶಾಸಕ ಹೆಚ್.ಸಿ.ಬಾಲಕೃಷ್ಣಗೆ ತಿರುಗೇಟು ನೀಡಿದ್ದಾರೆ. ಸೆಪ್ಟೆಂಬರ್ ಕ್ರಾಂತಿ ಆಗೇ ಆಗುತ್ತೆ.. ಬಾಲಕೃಷ್ಣ ಬಿಜೆಪಿಗೆ ಹೋಗ್ತಾರೆ. ಇದನ್ನೇ ನಾನು ಪ್ರಸ್ತಾಪ ಮಾಡಿದ್ದು ಅಂತಾ ಟಕ್ಕರ್ ನೀಡಿದ್ದಾರೆ.
ಕೆ.ಎನ್. ರಾಜಣ್ಣ ಸಿಎಂ ಸಿದ್ದರಾಮಯ್ಯ ಅತ್ಯಾಪ್ತರಾಗಿದ್ದು, ವಾಲ್ಮೀಕಿ ಸಮುದಾದ ಪ್ರಭಾವಿ ನಾಯಕರು ಕೂಡ. ಹೀಗಾಗಿ ರಾಜಣ್ಣ ವಜಾಗೊಂಡ ಬೆನ್ನಲ್ಲೆ ವಾಲ್ಮೀಕಿ ಸಮುದಾಯ ಸಿಡಿದೆದ್ದಿತ್ತು. ಅಲ್ಲದೇ ರಾಜಣ್ಣ ಮನೆಯಲ್ಲಿ ವಾಲ್ಮೀಕಿ ಸಮುದಾದ ಸ್ವಾಮೀಜಿಗಳು ಸಭೆ ನಡೆಸಿದ್ರು.. ಮತ್ತೆ ರಾಜಣ್ಣಗೆ ಮಂತ್ರಿಗಿರಿ ಕೊಡಬೇಕೆಂದು ಸ್ವಾಮೀಜಿಗಳು ಬ್ಯಾಟಿಂಗ್ ಮಾಡಿದ್ರು.. ಆದ್ರೀಗ ಬಾಲಕೃಷ್ಣ ಕೊಟ್ಟ ಹೇಳಿಕೆ ಸೆಪ್ಟೆಂಬರ್ ಕ್ರಾಂತಿಗೆ ಕಿಚ್ಚು ಹೊತ್ತಿಸಿದೆ. ಅಲ್ಲದೇ, ಕಾಂಗ್ರೆಸ್ನಲ್ಲೂ ಕೋಲಾಹಲ ಸೃಷ್ಟಿಸಿರೋದಂತೂ ಸುಳ್ಳಲ್ಲ..