Ashwaveega News 24×7 ಸೆ. 10: ಭಾನುವಾರ ಗಣೇಶ ಮೂರ್ತಿ ವಿಸರ್ಜನೆ ವೇಳೆ ನಡೆದಿದ್ದ ಕಲ್ಲು ತೂರಾಟ ಪ್ರಕರಣದ ಬಳಿಕ ಮದ್ದೂರು ಬೂದಿ ಮುಚ್ಚಿದ ಕೆಂಡದಂತೆ ಇದೆ. ಮಂಗಳವಾರ ಮದ್ದೂರು ಪಟ್ಟ ಬಂದ್ ನಡೆಸಲಾಗಿದೆ. ಈ ಮಧ್ಯೆ ಇವತ್ತು ಬಿಜೆಪಿ ನಿಯೋಗ ಮದ್ದೂರಿಗೆ ಭೇಟಿ ನೀಡಿದ್ದು, ಮದ್ದೂರಿನಲ್ಲಿ 28 ಗಣೇಶ ಮೂರ್ತಿಗಳ ಸಾಮೂಹಿಕ ವಿಸರ್ಜನೆ ನಡೆದಿದೆ. ಪ್ರತಿಪಕ್ಷ ನಾಯಕ ಆರ್ ಅಶೋಕ್, ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ನೇತೃತ್ವದ ನಿಯೋಗ ಮದ್ದೂರಿನಲ್ಲಿ ಅಬ್ಬರಿಸಿದೆ.
ಮದ್ದೂರಿನ ಐಬಿ ಸರ್ಕಲ್, ಪೇಟೆಬೀದಿ, ಕೊಲ್ಲಿ ಸರ್ಕಲ್ನಲ್ಲಿ ಗಣೇಶ ಮೂರ್ತಿಗಳ ಮೆರವಣಿಗೆ ಮಾಡಲಾಯಿತು. ಕೇಸರಿ ಧ್ವಜವನ್ನು ಹಿಡಿದು ಹಿಂದೂ ಕಾರ್ಯಕರ್ತರು ಭರ್ಜರಿ ಡ್ಯಾನ್ಸ್ ಮಾಡಿದರು. ಜೈಶ್ರೀರಾಮ್, ಜೈಹನುಮಾನ್ ಘೋಷಣೆ ಕೂಗಿದರು.
ಮಂಡ್ಯದ ಮದ್ದೂರಿಗೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ನೇತೃತ್ವದ ನಿಯೋಗವೂ ಭೇಟಿ ಕೊಟ್ಟಿದೆ.
ಸಾಮೂಹಿಕ ಗಣೇಶ ವಿಸರ್ಜನಾ ಮೆರವಣಿಗೆಯಲ್ಲಿ ಭಾಗಿ ಆಗಿದೆ. ವಿಜಯೇಂದ್ರ, ಅಶೋಕ್, ಸಿ.ಟಿ.ರವಿ, ಸಂಸದ ಯದುವೀರ್ ಒಡೆಯರ್, ಛಲವಾದಿ ನಾರಾಯಣಸ್ವಾಮಿ ಸೇರಿದಂತೆ ಘಟಾನುಘಟಿ ನಾಯಕರೇ ಮೆರವಣಿಗೆಯಲ್ಲಿ ಭಾಗಿಯಾದರು. ಗಣೇಶನಿಗೆ ಪೂಜೆ ಸಲ್ಲಿಸಿದರು.
ಮೆರವಣಿಗೆ ವೇಳೆ ಬಿಜೆಪಿ ನಾಯಕರು ಕುಣಿದು ಕುಪ್ಪಳಿಸಿದರು. ಕೇಸರಿ ಶಾಲು ಹಿಡಿದು ಮದ್ದೂರಿನಲ್ಲಿ ಅಬ್ಬರಿಸಿರುವುದು ಎಲ್ಲರ ಗಮನ ಸೆಳೆಯಿತು. ಮದ್ದೂರಿಗೆ ಮದ್ದೂರೇ ಕೇಸರಿಮಯವಾಗಿದೆ. ಇನ್ನು ಶಿಂಷಾ ನದಿಯತ್ತ ಸಾಗುತ್ತಿರುವ ಸಾಮೂಹಿಕ ಗಣಪತಿ ವಿಸರ್ಜನಾ ಮೆರವಣಿಗೆಯಲ್ಲಿ ಹಿಂದೂ ಕಾರ್ಯಕರ್ತರು ಶಾಲು ಬೀಸಿ, ಕುಣಿದು ಕುಪ್ಪಳಿಸುತ್ತಿದ್ದಾರೆ.
ಇನ್ನೊಂದೆಡೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮದ್ದೂರು ನಗರದಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ.
