Ashwaveega News 24×7 ಜನವರಿ 17 – ಬೆಂಗಳೂರು: ಬಾಂಗ್ಲಾದೇಶಿ ವಲಸಿಗರಿಗೆ ಬೆದರಿಕೆ ಹಾಗೂ ಭೀತಿ ಉಂಟು ಮಾಡಿದ ಆರೋಪದ ಮೇಲೆ ಹಿಂದೂ ರಾಷ್ಟ್ರ ರಕ್ಷಣಾ ಪಡೆ ಮುಖಂಡ ಪುನೀತ್ ಕೆರೆಹಳ್ಳಿರನ್ನು ಬನ್ನೇರುಘಟ್ಟ ಪೊಲೀಸರು ಬಂಧಿಸಿದ್ದಾರೆ.
ಬನ್ನೇರುಘಟ್ಟ ಮತ್ತು ಬೇಗೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಪ್ರದೇಶಗಳಲ್ಲಿ ಪುನೀತ್ ಕೆರೆಹಳ್ಳಿ ಹಾಗೂ ಅವರ ಬೆಂಬಲಿಗರು ವಲಸಿಗರ ಮನೆಗಳಿಗೆ ನುಗ್ಗಿ, ಅವರ ಪೌರತ್ವ ಮತ್ತು ಗುರುತಿನ ದಾಖಲೆಗಳನ್ನು ಕೇಳಿದ್ದರು ಎನ್ನಲಾಗಿದೆ. ಈ ವೇಳೆ ಕೆಲವರು ತಾವು ಬಾಂಗ್ಲಾದೇಶದವರು ಎಂದು ಹೇಳಿಕೊಂಡಿದ್ದಾರೆ ಎಂಬ ಆರೋಪವಿದೆ.
ಬಾಂಗ್ಲಾದೇಶದ ನಾಗರಿಕರಿಗೆ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್ ದೊರೆತಿರುವುದು, ಕೆಲವರಿಗೆ ಬ್ಯಾಂಕುಗಳಿಂದ ಸಾಲ ಕೂಡ ಮಂಜೂರಾಗಿರುವ ಬಗ್ಗೆ ಪುನೀತ್ ಕೆರೆಹಳ್ಳಿ ಪ್ರಶ್ನೆ ಮಾಡಿದ್ದರು. ಸೂಕ್ತ ದಾಖಲೆಗಳಿಲ್ಲದೆ ಈ ಸೌಲಭ್ಯಗಳು ಹೇಗೆ ಲಭ್ಯವಾಯಿತು ಎಂಬುದನ್ನು ಅವರು ಪ್ರಶ್ನಿಸುತ್ತಿದ್ದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.
ಈ ಹಿನ್ನೆಲೆಯಲ್ಲಿ ವಲಸಿಗರಿಗೆ ಭೀತಿ ಉಂಟು ಮಾಡಿದ ಆರೋಪದ ಮೇಲೆ ಬನ್ನೇರುಘಟ್ಟ ಪೊಲೀಸ್ ಠಾಣಾ ಪೊಲೀಸರು ಪುನೀತ್ ಕೆರೆಹಳ್ಳಿಯನ್ನು ಬಂಧಿಸಿದ್ದಾರೆ. ಬಂಧನ ಸುದ್ದಿ ತಿಳಿದ ಬೆಂಬಲಿಗರು ಠಾಣೆಯ ಎದುರು ಜಮಾಯಿಸಿ, ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಪರಿಸ್ಥಿತಿ ನಿಯಂತ್ರಣಕ್ಕಾಗಿ ಪೊಲೀಸರು ಭದ್ರತೆ ಹೆಚ್ಚಿಸಿದ್ದರು.
