
siddaramaiah br patil relationship statement clarification
(ಅಶ್ವವೇಗ) Ashwaveega News 24×7 ಜು.02: ಸಿದ್ದರಾಮಯ್ಯ ಅವರು ಲಕ್ಕಿ ಲಾಟರಿಯಲ್ಲಿ ಸಿಎಂ ಆದವರು ಎಂಬ ಹೇಳಿಕೆಗೆ ಸ್ಪಷ್ಟೀಕರಣ ನೀಡಿರುವ ಹಿರಿಯ ಶಾಸಕ ಬಿ.ಆರ್. ಪಾಟೀಲ್ ಅವರು, ”ನನ್ನ ಹೇಳಿಕೆಯನ್ನು ತಿರುಚಿ ನನ್ನನ್ನು ತೇಜೋವಧೆ ಮಾಡುತ್ತಿರುವುದು ಸರಿಯಲ್ಲ” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಈ ಸಂಬಂಧ ತಮ್ಮ ಹೇಳಿಕೆಯ ವಿಡಿಯೋ ಬಿಡುಗಡೆ ಮಾಡಿರುವ ಅವರು, ”ನಿನ್ನೆ ಕೆ.ಆರ್.ಪೇಟೆಯಲ್ಲಿ ಆತ್ಮೀಯ ಸ್ನೇಹಿತರ ಜೊತೆ ಮಾತನಾಡುವಾಗ ಸಿದ್ದರಾಮಯ್ಯ ವಿಷಯ ಪ್ರಸ್ತಾಪ ಆಯಿತು. ನಾನು ಕೆಲವು ವಿಚಾರ ಮಾತನಾಡಿದ್ದೇನೆ” ಎಂದಿದ್ದಾರೆ.
ಸಿದ್ದರಾಮಯ್ಯ ಅವರನ್ನು ಸೋನಿಯಾ ಗಾಂಧಿ ಜೊತೆ ಭೇಟಿ ಮಾಡಿಸಿದ್ದೇ ನಾನು ಎಂದು ಎಲ್ಲೂ ಹೇಳಿಲ್ಲ. ಅದು ಸಂಪೂರ್ಣ ತಪ್ಪು. ನಾವು ಜೊತೆಯಾಗಿ ಭೇಟಿಗೆ ಹೋಗಿದ್ದೆವು. ಈ ಸಲ ಬೇಡ ಎಂದು ಅವರು ಹೇಳಿದ್ದರು. ಆದರೆ, ನಾನು ಒತ್ತಾಯದಿಂದ ಅವರನ್ನು ಭೇಟಿಯಾಗುವಂತೆ ಮನವೊಲಿಸಿದೆ. ಸಿದ್ದರಾಮಯ್ಯ ಒಬ್ಬ ಮಾಸ್ ಲೀಡರ್, ಅವರನ್ನು ಮುಖ್ಯಮಂತ್ರಿ ಮಾಡುವ ಶಕ್ತಿ ನನಗಿಲ್ಲ. ನನ್ನ ಮತ್ತು ಅವರ ಅತ್ಮೀಯ ಸಂಬಂಧ ಹಾಳು ಮಾಡಲು ಉದ್ದೇಶಪೂರ್ವಕವಾಗಿ ಪ್ರಯತ್ನ ನಡೆದಿದೆ ಎಂದು ತಿಳಿಸಿದ್ದಾರೆ.
ನಾನು ಸೇರಿದಂತೆ 9 ಶಾಸಕರು ಜೆಡಿಎಸ್ ಬಿಟ್ಟು ಸಿದ್ದರಾಮಯ್ಯ ಅವರ ನಾಯಕತ್ವದಲ್ಲಿ ಕಾಂಗ್ರೆಸ್ ಸೇರಿದ್ದೆವು. ಕಾಂಗ್ರೆಸ್ ಅವರ ಜನ ಬೆಂಬಲ ನೋಡಿ ಅವರನ್ನು ಸಿಎಂ ಮಾಡಿದೆಯೇ ಹೊರತು ನಾವು ಹೇಳಿದ್ದಕ್ಕೆ ಮಾಡಿಲ್ಲ. ಸಿದ್ದರಾಮಯ್ಯ ಮತ್ತು ನಮ್ಮ ಸಂಬಂಧ ಹಾಳು ಮಾಡಲು ಕೆಲವರು ಹೀಗೆ ಮಾಡುತ್ತಿರುವುದು ಸರಿಯಲ್ಲ” ಎಂದು ಬೇಸರ ಹೊರಹಾಕಿದ್ದಾರೆ.