Ashwaveega News 24×7 ಫೆಬ್ರವರಿ 15 -2026 – ಬೆಂಗಳೂರು : ಬಿಕ್ಲು ಶಿವ ಕೊಲೆ ಪ್ರಕರಣದಲ್ಲಿ A-5 ಆರೋಪಿಯಾಗಿ ಬಂಧನಕ್ಕೊಳಗಾಗಿರುವ ಶಾಸಕ ಬೈರತಿ ಬಸವರಾಜ್ ಅವರ ನಿವಾಸಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಭೇಟಿ ನೀಡಿ ಕುಟುಂಬಸ್ಥರಿಗೆ ಧೈರ್ಯ ತುಂಬಿದರು.
ಬೆಂಗಳೂರು ಕೆ.ಆರ್.ಪುರದಲ್ಲಿರುವ ಬೈರತಿ ಬಸವರಾಜ್ ಅವರ ಮನೆಗೆ ವಿಜಯೇಂದ್ರ ಭೇಟಿ ನೀಡಿದ್ದು, ಈ ಸಂದರ್ಭದಲ್ಲಿ ಸಂಸದ ಗೋವಿಂದ ಕಾರಜೋಳ ಹಾಗೂ ಶಾಸಕ ಪ್ರೀತಮ್ ಗೌಡ ಕೂಡ ಉಪಸ್ಥಿತರಿದ್ದರು.ಇದಕ್ಕೂ ಮುನ್ನ ನಿನ್ನೆ ವಿಪಕ್ಷ ನಾಯಕ ಆರ್. ಅಶೋಕ್ ಸಹ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದ್ದರು.
ಕುಟುಂಬಸ್ಥರ ಜೊತೆ ಮಾತುಕತೆ ನಡೆಸಿದ ಬಳಿಕ ಮಾತನಾಡಿದ ವಿಜಯೇಂದ್ರ, “ಬೈರತಿ ಬಸವರಾಜ್ ಅವರಿಗೆ ನಾನು ಹಾಗೂ ಪಕ್ಷ ಸಂಪೂರ್ಣ ಬೆಂಬಲವಾಗಿ ಇದ್ದೇವೆ. ರಾಜಕೀಯ ಷಡ್ಯಂತ್ರಗಳು ಹೇಗೆ ನಡೆಯುತ್ತವೆ ಎಂಬುದು ನಮಗೆ ತಿಳಿದಿದೆ . ನ್ಯಾಯ ಪ್ರಕ್ರಿಯೆಯ ಮೇಲೆ ನಮಗೆ ನಂಬಿಕೆ ಇದೆ” ಎಂದು ಹೇಳಿದರು.
ಬಿಜೆಪಿ ನಾಯಕರು ಕ್ರಮವಾಗಿ ಬೈರತಿ ಕುಟುಂಬವನ್ನು ಭೇಟಿ ಮಾಡುತ್ತಿರುವುದು ಪ್ರಕರಣಕ್ಕೆ ರಾಜಕೀಯ ಆಯಾಮ ನೀಡಿದೆ. ಪ್ರಕರಣದ ತನಿಖೆ ಮುಂದುವರಿದಿದ್ದು, ಮುಂದಿನ ಬೆಳವಣಿಗೆಗಳತ್ತ ಎಲ್ಲರ ಗಮನ ನೆಟ್ಟಿದೆ.
