
Ashwaveega News 24×7 ಅಕ್ಟೋಬರ್. 06: ಬಿಹಾರ ವಿಧಾನಸಭಾ ಚುನಾವಣೆಗೆ ಇಂದೇ ಮುಹೂರ್ತ ನಿಗದಿಯಾಗಲಿದೆ. ಭಾರತೀಯ ಚುನಾವಣಾ ಆಯೋಗವು ಸಂಜೆ 4 ಗಂಟೆಗೆ ಮಾಧ್ಯಮಗೋಷ್ಠಿ ನಡೆಸಿ, ಚುನಾವಣಾ ದಿನಾಂಕವನ್ನು ಘೋಷಿಸಲಿದೆ.
243 ಸದಸ್ಯ ಬಲದ ಬಿಹಾರ ವಿಧಾನಸಭೆಯ ಅಧಿಕಾರಾವಧಿ ನವೆಂಬರ್ 22ರಂದು ಕೊನೆಗೊಳ್ಳಲಿದೆ. ಅಕ್ಟೋಬರ್ ಅಂತ್ಯದಲ್ಲಿ ಬಿಹಾರದಲ್ಲಿ ಛತ್ ಹಬ್ಬ ಆಚರಿಸಲಾಗುತ್ತದೆ. ಉದ್ಯೋಗಕ್ಕಾಗಿ ಬೇರೆ ಊರುಗಳಿಗೆ ತೆರಳಿದ್ದವರು ಈ ಹಬ್ಬಕ್ಕೆ ಆಗಮಿಸುತ್ತಾರೆ. ಆದ್ದರಿಂದ ಹಬ್ಬ ಮುಗಿದ ತಕ್ಷಣವೇ ಚುನಾವಣೆ ನಡೆಸಿದರೆ, ಮತದಾನ ಪ್ರಮಾಣ ಹೆಚ್ಚಾಗುತ್ತದೆ ಎಂದು ಚುನಾವಣಾ ಆಯೋಗವನ್ನು ರಾಜಕೀಯ ಪಕ್ಷಗಳು ಒತ್ತಾಯಿಸಿವೆ.
ಆಡಳಿತಾರೂಢ ಎನ್ಡಿಎ ಒಂದೇ ಹಂತದ ಚುನಾವಣೆಗೆ ಮನವಿ ಮಾಡಿದರೆ, ವಿರೋಧ ಪಕ್ಷಗಳು ಎರಡು ಹಂತಗಳಲ್ಲಿ ಚುನಾವಣೆ ನಡೆಸುವಂತೆ ಆಯೋಗವನ್ನು ಕೋರಿವೆ.
2020ರಲ್ಲಿ ಕೋವಿಡ್-19 ಮಹಾಮಾರಿಯ ಆತಂಕದಲ್ಲಿ ಬಿಹಾರ ವಿಧಾನಸಭಾ ಚುನಾವಣೆ ಮೂರು ಹಂತಗಳಲ್ಲಿ ನಡೆದಿತ್ತು.
ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಜ್ಞಾನೇಶ್ ಕುಮಾರ್, ಚುನಾವಣಾ ಆಯುಕ್ತರಾದ ಸುಖ್ಬೀರ್ ಸಿಂಗ್ ಸಂಧು ಮತ್ತು ವಿವೇಕ್ ಜೋಶಿ ಅವರು ಬಿಹಾರ ಭೇಟಿಯನ್ನು ಪೂರ್ಣಗೊಳಿಸಿದ ಮರುದಿನವೇ ಚುನಾವಣಾ ದಿನಾಂಕವನ್ನು ಪ್ರಕಟಿಸುತ್ತಿದ್ದಾರೆ.
ರಾಜ್ಯದ ಮತದಾರರ ಪಟ್ಟಿಯನ್ನು 22 ವರ್ಷಗಳ ಬಳಿಕ ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್)ಯ ಮೂಲಕ ಶುದ್ಧೀಕರಿಸಲಾಗಿದೆ. ಮತದಾರರು ಚುನಾವಣೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಿ ಎಂದು ಕೇಂದ್ರ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಭಾನುವಾರ ಕರೆ ನೀಡಿದ್ದರು.