ಕಳೆದ ನಾಲ್ಕು ದಿನಗಳಿಂದ ದೆಹಲಿಯಲ್ಲೇ ಬೀಡು ಬಿಟ್ಟಿರುವ ಸಚಿವ ಸತೀಶ್ ಜಾರಕಿಹೊಳಿ, ಅಲ್ಲಿಯೇ ಕುಳಿತು ರಾಜಕೀಯ ದಾಳ ಉರುಳಿಸುತ್ತಿದ್ದಾರಾ ಅನ್ನೋ ಅನುಮಾನಗಳು ಶುರುವಾಗಿವೆ. ಡಿಸಿಎಂ ಡಿಕೆ ಶಿವಕುಮಾರ್ ಕೂಡ ಇದೇ ವೇಳೆ ದೆಹಲಿಯಲ್ಲಿರೋದು ವಿಶೇಷ. ಯಾವತ್ತೂ ಬೇರೆ ಪಕ್ಷದ ಮುಖಂಡರನ್ನು ನೇರವಾಗಿ ಭೇಟಿಯಾಗದ ಸತೀಶ್ ಜಾರಕಿಹೊಳಿ, ಜೆಡಿಎಸ್ ವರಿಷ್ಠರಾದ HD ದೇವೇಗೌಡ & HD ಕುಮಾರಸ್ವಾಮಿಯನ್ನು ಭೇಟಿಯಾಗಿರೋದು ವಿಶೇಷ. ರಾಜ್ಯ ರಾಜಕಾರಣದಲ್ಲಿಅಧಿಕಾರ ಹಂಚಿಕೆಯ ಚರ್ಚೆಗಳು ಜೋರಾಗಿರುವಾಗಲೇ, ಈ ಬೆಳವಣಿಗೆ ನಡೆದಿರುವುದು ರಾಜ್ಯ ರಾಜಕಾರಣದಲ್ಲಿಸಂಚಲನ ಮೂಡಿಸಿದೆ..!
ಈ ಎಲ್ಲಾ ಸಂಶಯಗಳಿಗೆ ಕಾರಣ, ವರ್ಷಾಂತ್ಯಕ್ಕೆ ತನಗೆ ಅಧಿಕಾರ ವರ್ಗಾವಣೆಯಾಗಬೇಕು ಎಂದು ಈಗಾಗಲೇ ಡಿಸಿಎಂ ಡಿಕೆ ಶಿವಕುಮಾರ್ ರಾಜಕೀಯ ದಾಳ ಉರುಳಿಸಿರುವುದು. ಡಿಕೆ ಶಿವಕುಮಾರ್ ಮುಖ್ಯಮಂತ್ರಿಯಾಗೋದು ಸಿದ್ಧರಾಮಯ್ಯ ಬಣಕ್ಕೆ ಸುತಾರಾಂ ಇಷ್ಟವಿಲ್ಲ. ಸಿಎಂ ಆಗಿ ಸಿದ್ಧರಾಮಯ್ಯ ಅವರೇ 5 ವರ್ಷ ಮುಂದುವರೆಯುತ್ತಾರೆ ಎಂದು, ಸಿದ್ದು ಆಪ್ತ ಶಾಸಕರು ಪದೇ ಪದೇ ಹೇಳಿಕೆ ನೀಡಿರೋದು ಇದಕ್ಕೆ ನಿದರ್ಶನ. ನಾನೇ 5 ವರ್ಷವೂ ಸಿಎಂ ಆಗಿ ಮುಂದುವರೆಯುತ್ತೇನೆ ಎಂದು ಈಗಾಗಲೇ ಖುದ್ದು ಸಿದ್ಧರಾಮಯ್ಯ ಅವರೇ ಹಲವು ಬಾರಿ ಹೇಳಿಕೆ ನೀಡಿದ್ದಾರೆ. ಇದು ರಾಜ್ಯ ಕಾಂಗ್ರಸ್ʼನಲ್ಲಿ ಸಿದ್ಧರಾಮಯ್ಯ ಹಾಗೂ ಡಿಕೆಶಿ ಬಣಗಳ ನಡುವಿನ ತಿಕ್ಕಾಟಕ್ಕೂ ಕಾರಣವಾಗಿತ್ತು!

ಒಂದು ಕಡೆ ಸಿದ್ಧರಾಮಯ್ಯ ಆಪ್ತರು ಸಿದ್ದು ಪರವಾಗೇ ಭರ್ಜರಿ ಬ್ಯಾಟಿಂಗ್ ಮಾಡುತ್ತಿದ್ದರೆ, ಇನ್ನೊಂದೆಡೆ ಡಿಕೆ ಬೆಂಬಲಿಗರು ಡಿಕೆಶಿ ಪರವಾಗಿ ಬ್ಯಾಟಿಂಗ್ ಮಾಡತೊಡಗಿದರು. ಇದೆಲ್ಲವನ್ನೂ ಒಂದು ಹಂತದವರೆಗೆ ನೋಡಿದ ಡಿಕೆಶಿ, ಕೊನೆಗೆ ಸ್ವಲ್ಪ Aggressive ಆದಂತೆ ಕಂಡುಬಂದರು. ಹಿಂದುತ್ವದ ಕುರಿತು ನಾವರ ಹೇಳಿಕೆ, ಖರ್ಗೆ ವಿರೋಧದ ನಡುವೆಯೂ, ಕೂಂಭಮೇಳಕ್ಕೆ ಕುಟುಂಬ ಸಮೇತ ಭೇಟಿ ನೀಡಿದ್ದು, ಸದ್ಗುರು ಅವರ ಶಿವರಾತ್ರಿ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಅಮಿತ್ ಶಾ ಜೊತೆಗೆ ವೇದಿಕೆ ಹಂಚಿಕೊಂಡಿದ್ದು ಇವೆಲ್ಲವೂ, ತನಗೆ ಅಧಿಕಾರ ಹಂಚಿಕೆಯಾಗದೇ ಹೋದಲ್ಲಿ ತಾನು ಯಾವ ಹಂತಕ್ಕೂ ಹೋಗಲು ಸಿದ್ಧ ಎಂದು ಹೈಕಮಾಂಡ್ʼಗೆ ಸಂದೇಶ ರವಾನೆ ಮಾಡುವ ಪ್ರಯತ್ನದಂತೆಯೇ ಕಂಡವು!
ಈಗ ಸತೀಶ್ ಜಾರಕಿಹೊಳಿಯ ಜೆಡಿಎಸ್ ವರಿಷ್ಠರ ಭೇಟಿಗೆ ಇಷ್ಟು ಮಹತ್ವ ಬರಲು ಕಾರಣ, ಸತೀಶ್ ಜಾರಕಿಹೊಳಿ ಸಿಎಂ ಸಿದ್ಧರಾಮಯ್ಯ ಆಪ್ತ ವಲಯದ ಶಾಸಕ ಅನ್ನೋದು. ಸಾಮಾನ್ಯವಾಗಿ ಅನ್ಯ ಪಕ್ಷದ ನಾಯಕರನ್ನ ನೇರವಾಗಿ ಭೇಟಿಯಾಗದ ಸಚಿವ ಸತೀಶ್ ನಡೆ ಹಲವು ಅನುಮಾನಗಳಿಗೆ ಕಾರಣವಾಗಿದೆ. ಇದು ರಾಜಕೀಯ ವಲಯದಲ್ಲಿ ಬೇರೆ ಬೇರೆ ರೀತಿಯ ವ್ಯಾಖ್ಯಾನಗಳಿಗೆ ಕಾರಣವಾಗುತ್ತಿದೆ. ಡಿಕೆ ಶಿವಕುಮಾರ್ ಸಿಎಂ ಆಗೋದನ್ನ ಶತಾಯಗತಾಯ ವಿರೋಧಿಸುವ ನಾಯಕರಲ್ಲಿ, ಸತೀಶ್ ಜಾರಕಿಹೊಳಿ ಪ್ರಮುಖರು. ಸಚಿವ, ರಾಜಣ್ಣ, ಸತೀಶ್ ಜಾರಕಿಹೊಳಿ ಈ ಹಿಂದೆ ಕೆಪಿಸಿಸಿ ಅಧ್ಯಕ್ಷ ಸ್ಥಾನದಿಂದ ಡಿಕೆ ಶಿವಕುಮಾರ್ʼರನ್ನು ಬದಲಾಯಿಸುವುದಕ್ಕೂ ಪ್ರಯತ್ನ ಪಟ್ಟಿದ್ದರು ಅನ್ನೋದು ಗಮನಿಸಬೇಕಾದ ಅಂಶ.!!
ಒಂದು ವೇಳೆ ಹೈಕಾಮಂಡ್ ಅಧಿಕಾರ ಬದಲಾವಣೆಗೆ ಮುಂದಾದಲ್ಲಿ, ಸಿಎಂ ಸ್ಥಾನದ ಮೇಲೆ ಕಣ್ಣಿಟ್ಟಿರುವ ತಾನು, ಶಾಸಕರ ಬೆಂಬಲ ಹೆಚ್ಚಿಸಿಕೊಳ್ಳುವ ಪ್ರಯತ್ನದಲ್ಲಿ ಸತೀಶ್ ತೊಡಗಿದ್ದಾರೆ ಎನ್ನಲಾಗಿದೆ. ರಾಜ್ಯದಲ್ಲಿ ನಡೆದಿದೆ ಎನ್ನಲಾದ ಹನಿ ಟ್ರ್ಯಾಪ್ ಪ್ರಕರಣವನ್ನೇ ಅಸ್ತ್ರವನ್ನಾಗಿಸಿಕೊಂಡ ಸತೀಶ್, ದೆಹಲಿಯಲ್ಲಿ ಬೀಡುಬಿಟ್ಟಿದ್ದಾರೆ. ಆದರೆ ರಾಜಕೀಯದ ಒಂದು ವಲಯ, ಇದನ್ನು ಬೇರೆ ರೀತಿಯಲ್ಲೇ ವ್ಯಾಖ್ಯಾನಿಸುತ್ತಿದೆ. ಕೆಲವು ರಾಜಕೀಯ ಪಂಡಿತರು ಇದನ್ನು ಮಹಾರಾಷ್ಟ್ರದ ರಾಜಕೀಯಕ್ಕೆ ಹೋಲಿಸುತ್ತಿದ್ದಾರೆ. ಸತೀಶ್ ಜಾರಕಿಹೊಳಿಯೇ ಕರ್ನಾಟಕದ ಶಿಂಧೆ ಎಂದು ವ್ಯಾಖ್ಯಾನಿಸುತ್ತಿದ್ದಾರೆ. ತಾನು ಮುಖ್ಯಮಂತ್ರಿಯಾಗೋ ಕಾರಣಕ್ಕೇ ಸಚಿವ ಸತೀಶ್, ಕುಮಾರಸ್ವಾಮಿಯನ್ನು ಭೇಟಿಯಾಗಿದ್ದಾರೆ ಎಂದು ಜೆಡಿಎಸ್ ಶಾಸಕ ಜಿಟಿ ದೇವೇಗೌಡ ಸಹ, ಹೇಳಿಕೆ ನೀಡಿದ್ದಾರೆ!
ಇದೆಲ್ಲ ಅನುಮಾನಗಳು ವ್ಯಕ್ತವಾಗೋದಕ್ಕೆ ಕಾರಣಗಳೂ ಇಲ್ಲದಿಲ್ಲ. ಸದ್ಯ ಬಿಜೆಪಿ 60+ ಶಾಸಕರ ಬಲ ಹೊಂದಿದೆ. ಜೆಡಿಎಸ್ 18 ಶಾಸಕರ ಬಲ ಹೊಂದಿದೆ. ಒಂದು ವೇಳೆ ಸಿದ್ಧರಾಮಯ್ಯ ಸಿಎಂ ಸ್ಥಾನದಿಂದ ಕೆಳಗಿಳಿಯುವ ಸಂದರ್ಭ ಬಂದಲ್ಲಿ, ಬಿಜೆಪಿ+ಜೆಡಿಎಸ್ ಶಾಸಕರ ಜೊತೆಗೆ ಸಚಿವ ಸತೀಶ್ ಜಾರಕಿಹೊಳಿ ಕೂಡ ಒಂದಷ್ಟು ಶಾಸಕರನ್ನು ತನ್ನ ಜೊತೆಗೆ ಕರೆದುಕೊಂಡು ಬಂದು, ಸಿಎಂ ಆಗುವ ಯೋಜನೆ ರೂಪಿಸಿರಬಹುದು!
ಹಾಗಾದ್ರೆ ಇದೆಲ್ಲಾ ಮುಂದೆ ನಡೆಯುತ್ತಾ!? ಸಚಿವ ಸತೀಶ್ ಜಾರಕಿಹೊಳಿಗೇ ಬಿಜೆಪಿ ಹಾಗೂ ಜೆಡಿಎಸ್ ಗಾಳ ಹಾಕಿದ್ಯಾ!? ಕರ್ನಾಟಕದ ʼಶಿಂಧೆʼಯಾಗ್ತಾರಾ ಸತೀಶ್ ಜಾರಕಿಹೊಳಿ..!? ಇವರೆಲ್ಲ ಸೇರಿಕೊಂಡು ಡಿಕೆ ಶಿವಕುಮಾರ್ʼಗೆ ಮುಖ್ಯಮಂತ್ರಿ ಸ್ಥಾನವನ್ನು ತಪ್ಪಿಸ್ತಾರಾ..!? ಇದಕ್ಕೆಲ್ಲ ಕಾಲವೇ ಉತ್ತರಿಸಬೇಕು..!