Ashwaveega News 24×7 ಫೆಬ್ರವರಿ 17 -2026 ಮೈಸೂರು : ಹಿರಿತೆರೆಯ ಚಿತ್ರಗಳಿಗೆ ಸಾಟಿಯಾಗಿ ಈಗ ಕಿರುಚಿತ್ರಗಳೂ ಸಿನಿಪ್ರಿಯರ ಗಮನ ಸೆಳೆಯುತ್ತಿವೆ. ಕೇವಲ 20 ನಿಮಿಷಗಳ ಅವಧಿಯಲ್ಲಿ ಗಟ್ಟಿಯಾದ ಕಥಾಹಂದರ ಮತ್ತು ತಾಂತ್ರಿಕ ಮೌಲ್ಯಗಳಿಂದ ಪ್ರೇಕ್ಷಕರ ಮನಗೆದ್ದ ಎರಡು ಕಿರುಚಿತ್ರಗಳು “ಐ ಸಿ ಯು (I See You)” ಮತ್ತು “ಮಂಡಲ” ಇತ್ತೀಚೆಗೆ ಮೈಸೂರಿನಲ್ಲಿ ಪ್ರದರ್ಶನ ಕಂಡವು. ಪ್ರದರ್ಶನದ ಬಳಿಕ ಚಿತ್ರತಂಡದವರಿಂದ ಪತ್ರಿಕಾಗೋಷ್ಠಿಯೂ ನಡೆಯಿತು.
ರವೀಂದ್ರ ಜೋಶಿ ನಿರ್ಮಾಣದಲ್ಲಿ, ಮಿಂಚು ಜೋಶಿ ನಿರ್ದೇಶನದಲ್ಲಿ ಮೂಡಿಬಂದ “ಐ ಸಿ ಯು” ಕಿರುಚಿತ್ರದಲ್ಲಿ ಮಿಂಚು ಜೋಶಿ, ವಿಷ್ಣು ರಾಮನ್, ರಿಷಿ ರಾಮನ್ ಹಾಗೂ ಸಂದೀಪ್ ಶಿವಶಂಕರ್ ಅಭಿನಯಿಸಿದ್ದಾರೆ. ಕನ್ನಡ, ಇಂಗ್ಲಿಷ್ ಮತ್ತು ಹಿಂದಿ ಭಾಷೆಗಳಲ್ಲಿ ನಿರ್ಮಾಣವಾಗಿರುವ ಈ ಚಿತ್ರ ಮುಂಬೈ ನಗರದ ಅಸ್ತವ್ಯಸ್ತ ಬದುಕಿನ ಹಿನ್ನೆಲೆಯಲ್ಲಿನ ಒಂದು ಸಂಬಂಧದ ಸೂಕ್ಷ್ಮ ಹಂತಗಳನ್ನು ಚಿತ್ರಿಸುತ್ತದೆ .

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನಿರ್ದೇಶಕಿ ಮಿಂಚು ಜೋಶಿ, “ಪರಂವಃ ಸ್ಟುಡಿಯೋಸ್ ನಿರ್ಮಾಣದ ‘ಸಕುಟುಂಬ ಸಮೇತ’ ಮತ್ತು ‘ಇಬ್ಬನಿ ತಬ್ಬಿದ ಇಳೆಯಲಿ’ ಚಿತ್ರಗಳಲ್ಲಿ ಸಹಾಯಕ ನಿರ್ದೇಶಕಿಯಾಗಿ ಕೆಲಸ ಮಾಡಿದ ಅನುಭವ ನನಗೆ ಇದೆ. ಸ್ವತಂತ್ರ ನಿರ್ದೇಶನದ ಮೊದಲ ಹೆಜ್ಜೆಯಾಗಿ ‘ಐ ಸಿ ಯು’ ನನ್ನ ಪ್ರಯತ್ನ. ಒಂದೇ ದಿನದ ಅವಧಿಯಲ್ಲಿ ಸಾಗುವ ಈ ಕಥೆ, ಸಂಬಂಧದಲ್ಲಿ ದೂರವಾಗುತ್ತಿರುವ ಯುವತಿಯೊಬ್ಬಳ ಆಂತರಿಕ ಸಂಘರ್ಷವನ್ನು ಆವಿಷ್ಕರಿಸುತ್ತದೆ. ನಟನಾ ತರಗತಿಯೊಂದರ ಅನುಭವವು ಅವಳಿಗೆ ಆತ್ಮಪರಿಶೀಲನೆಗೆ ದಾರಿ ಮಾಡಿಕೊಡುತ್ತದೆ ,” ಎಂದರು. ಚಿತ್ರದಲ್ಲಿ ನಟಿಸಿರುವ ವಿಷ್ಣು ರಾಮನ್, ರಿಷಿ ರಾಮನ್ ಹಾಗೂ ಸಂಗೀತ ನಿರ್ದೇಶಕ ಜುಬಿನ್ ಪಾಲ್ ಸಹ ಉಪಸ್ಥಿತರಿದ್ದರು.
ಇನ್ನೊಂದು ಕಿರುಚಿತ್ರ “ಮಂಡಲ” ರಾಮನ್ ಪ್ರೊಡಕ್ಷನ್ಸ್ ನಿರ್ಮಾಣದಲ್ಲಿ, ರಿಷಿ ರಾಮನ್ ರಚನೆ ಮತ್ತು ನಿರ್ದೇಶನದಲ್ಲಿ ಮೂಡಿಬಂದಿದೆ. ರಿಷಿ ರಾಮನ್, ಅನಾಮಿಕ ದತ್ತ, ಪ್ರಜ್ವಲ್ ಕುಮಾರ್ ಹಾಗೂ ಮಾನಸ ರಾಜ್ ಗೌಡ ಅಭಿನಯಿಸಿರುವ ಈ ಚಿತ್ರ ಮನೋವೈಜ್ಞಾನಿಕ ಥ್ರಿಲ್ಲರ್ ಶೈಲಿಯಲ್ಲಿದೆ.

ಚಿತ್ರದ ಕುರಿತು ಮಾತನಾಡಿದ ನಿರ್ದೇಶಕ ರಿಷಿ ರಾಮನ್, “ವಿದೇಶದಲ್ಲಿ ವಾಸಿಸುವ ಭಾರತೀಯ ದಂಪತಿಗಳ ಕಥೆಯನ್ನು ಆಧಾರವಾಗಿ ತೆಗೆದುಕೊಂಡು ‘ಮಂಡಲ’ ನಿರ್ಮಿಸಲಾಗಿದೆ. LSD ಪ್ರಯೋಗದ ಹಿನ್ನೆಲೆಯಲ್ಲಿನ ಮನೋವೈಕಲ್ಯ, ಆನುವಂಶಿಕ ಆಘಾತ ಹಾಗೂ ಭಾವನಾತ್ಮಕ ಹಿಂಸೆಯನ್ನು ಈ ಚಿತ್ರ ಅನಾವರಣಗೊಳಿಸುತ್ತದೆ. ಒಂದೇ ರಾತ್ರಿಯಲ್ಲಿ, ಒಂದೇ ಮನೆಯಲ್ಲಿ ಚಿತ್ರೀಕರಣ ನಡೆಸಲಾಗಿದೆ. ಕ್ರೌಡ್ ಫಂಡಿಂಗ್ ಮೂಲಕ ನಿರ್ಮಾಣಗೊಂಡ ಈ ಚಿತ್ರ ಭವಿಷ್ಯದಲ್ಲಿ ಹಿರಿತೆರೆಯತ್ತ ಹೆಜ್ಜೆಯಿಡುವ ಕನಸನ್ನು ಹೊಂದಿದೆ,” ಎಂದು ತಿಳಿಸಿದರು.
ಛಾಯಾಗ್ರಾಹಕ ಸಂಜಿತ್ ಸಿಂಗ್, ಸಂಕಲನಕಾರ ಮಹೀಂದ್ರ ಹಾಗೂ ಸಂಗೀತ ನಿರ್ದೇಶಕ ನಂದನ್ ಶ್ರೀನಿವಾಸ್ ಚಿತ್ರ ನಿರ್ಮಾಣದ ಅನುಭವಗಳನ್ನು ಹಂಚಿಕೊಂಡರು. ಕನ್ನಡ ಹಾಗೂ ಇಂಗ್ಲಿಷ್ ಭಾಷೆಗಳಲ್ಲಿ ಮೂಡಿಬಂದಿರುವ “ಮಂಡಲ” ಕಿರುಚಿತ್ರವೂ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿದೆ.

ಒಟ್ಟಿನಲ್ಲಿ, ಮೈಸೂರಿನ ಯುವ ಪ್ರತಿಭೆಗಳ ಸೃಜನಾತ್ಮಕ ಪ್ರಯತ್ನಗಳು ಕಿರುಚಿತ್ರ ಕ್ಷೇತ್ರದಲ್ಲಿ ಹೊಸ ಭರವಸೆ ಮೂಡಿಸಿರುವುದು ವಿಶೇಷ …
