
fir filed against ex union minister anantkumar hegde
ಬೆಂಗಳೂರಿನ ಹೊರವಲಯದ ಹಳೆ ನಿಜಗಲ್ ಬಳಿ ನಡೆದ ರಸ್ತೆ ಗಲಭೆ ಘಟನೆಯಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪದ ಮೇಲೆ ಕೇಂದ್ರ ಮಾಜಿ ಸಚಿವ ಹಾಗೂ ಮಾಜಿ ಸಂಸದ ಅನಂತಕುಮಾರ್ ಹೆಗ್ಡೆ, ಅವರ ಗನ್ಮ್ಯಾನ್ ಮತ್ತು ಚಾಲಕನ ವಿರುದ್ಧ ದಾಬಸ್ಪೇಟೆ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.
ಹಳೆ ನಿಜಗಲ್ ಬಳಿ ಹೆಗಡೆ ಅವರು ಕಾರ್ಯಕ್ರಮವೊಂದನ್ನು ಮುಗಿಸಿಕೊಂಡು ಬರುತ್ತಿದ್ದಾಗ, ಎಸ್ಯುವಿ ಕಾರನ್ನು ಅಕ್ರಮವಾಗಿ ಓವರ್ ಟೇಕ್ ಮಾಡಿ ನಿಲ್ಲಿಸಿ ಚಾಲಕನ ವಿರುದ್ಧ ಮನಸೋ ಇಚ್ಛೆ ಹಲ್ಲೆ ನಡೆಸಿದ್ದಾರೆ ಎಂಬ ಆರೋಪವಾಗಿದೆ.
ಇನ್ನೊಂದು ಕಾರನ್ನು ಸೈಫ್ ಖಾನ್ ಎಂಬುವವರು ಚಲಾಯಿಸುತ್ತಿದ್ದು ಅನಂತ್ ಕುಮಾರ್ ಹೆಗ್ಡೆ ಅವರ ಕಾರು ಮುಂದಕ್ಕೆ ಹೋಗಲು ದಾರಿ ಮಾಡಿಕೊಡಲಿಲ್ಲ ಎಂಬ ಕಾರಣಕ್ಕೆ ಓವರ್ ಟೇಕ್ ಮಾಡಿ ನಿಲ್ಲಿಸಿ ವಾಗ್ವಾದಕ್ಕಿಳಿದು ಪರಿಸ್ಥಿತಿ ವಿಕೋಪಕ್ಕೆ ಹೋಯಿತು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಹೆಗ್ಡೆ ಅವರ ಕಾರು ಚಾಲಕ, ಸೈಫ್ ಖಾನ್ ಅವರ ಕಾರಿಗೆ ಎರಡು ಮೂರು ಬಾರಿ ಹಾರ್ನ್ ಮಾಡಿದ್ದರೂ ಸೈಫ್ ಖಾನ್ ಅದನ್ನು ಗಮನಿಸದೆ ಚಾಲನೆಯನ್ನು ಮುಂದುವರೆಸಿದರು. ಇದಕ್ಕೆ ಕೋಪದಿಂದ ಹೆಗಡೆ ಅವರ ಕಾರು ಚಾಲಕ ಎಸ್ಯುವಿಯನ್ನು ಅಡ್ಡಗಟ್ಟಿದ್ದಾರೆ. ನಂತರ ಚಾಲಕ ಮತ್ತು ಗನ್ಮ್ಯಾನ್ ಇಬ್ಬರೂ ಹೊರಬಂದು ಸೈಫ್ ಖಾನ್ ಮತ್ತು ಅವರ ಸಹೋದರನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.