
former mla ramappa lamani
Ashwaveega News 24×7 ಜು. 23: ಸರ್ಕಾರಿ ಆಸ್ಪತ್ರೆಯ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳಿ ಎನ್ನುವ ಬದಲು ‘ದುರುಪಯೋಗಪಡಿಸಿಕೊಳ್ಳಿ’ ಎಂದು ಮಾಜಿ ಶಾಸಕ ಯಡವಟ್ಟು ಮಾಡಿಕೊಂಡ ಘಟನೆ ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನಲ್ಲಿ ನಡೆದಿದೆ.
ಸರ್ಕಾರಿ ಆಸ್ಪತ್ರೆಯ ಶಂಕುಸ್ಥಾಪನೆ ಕಾರ್ಯಕ್ರಮಕ್ಕೆ ಆಗಮಿಸಿದ್ದ ಮಾಜಿ ಶಾಸಕ ರಾಮಪ್ಪ ಲಮಾಣಿ ಅವರ ಭಾಷಣ ಕೇಳಿ ಸಭಿಕರು ಮುಸಿಮುಸಿ ನಗುವ ಪ್ರಸಂಗ ನಡೆಯಿತು.
ಶಿರಹಟ್ಟಿ ತಾಲೂಕಿನಲ್ಲಿ ಸರ್ಕಾರಿ ಆಸ್ಪತ್ರೆಯ ಶಂಕುಸ್ಥಾಪನೆ ಕಾರ್ಯಕ್ರಮಕ್ಕೆ ಆಗಮಿಸಿದ್ದ ಮಾಜಿ ಶಾಸಕರು. ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡುವ ವೇಳೆ ಮಾತಿನ ಭರದಲ್ಲಿ ಹೇಳಿದರೋ ಅಥವಾ ದುರುಪಯೋಗ-ಸದುಪಯೋಗ ನಡುವಿನ ಅರ್ಥ ತಿಳಿಯದೇ ಮಾತನಾಡಿದರೋ ಗೊತ್ತಿಲ್ಲ. ಸರ್ಕಾರಿ ಆಸ್ಪತ್ರೆಯ ಸೌಲಭ್ಯವನ್ನು ಸದುಪಯೋಗ ಪಡಿಸಿಕೊಳ್ಳಿ ಎನ್ನುವ ಬದಲು ‘ದುರುಪಯೋಗ ಪಡೆಸಿಕೊಳ್ಳಿ’ ಎಂದು ಹೇಳುವ ಮೂಲಕ ಯಡವಟ್ಟು ಮಾಡಿಕೊಂಡಿದ್ದಾರೆ.
‘ದುರುಪಯೋಗಪಡಿಸಿಕೊಳ್ಳಿ’ ಎಂಬ ಮಾತು ಕೇಳಿ ಸಭಿಕರು ಬಿದ್ದುಬಿದ್ದು ನಗುವಂತಾಯ್ತು. ಬಳಿಕ ಕಾಂಗ್ರೆಸ್ ನಾಯಕಿ ಸುಜಾತಾ ದೊಡ್ಡಮನಿ ಅವರು ತಕ್ಷಣ ಮಧ್ಯಪ್ರವೇಶಿಸಿ, ‘ಅದು ದುರುಪಯೋಗ ಅಲ್ಲ, ಸದುಪಯೋಗ’ ಎಂದು ಸರಿಪಡಿಸಿದರು. ತಮ್ಮ ತಪ್ಪನ್ನು ಒಪ್ಪಿಕೊಂಡ ರಾಮಪ್ಪ ಲಮಾಣಿ ಮಾತನ್ನು ಮುಂದುವರಿಸಿದರು.
ಭಾಷಣದ ವೇಳೆ ‘ಆರು ಎಕರೆ ಜಮೀನನ್ನು 85 ಸಾವಿರಕ್ಕೆ’ ಖರೀದಿಸಲಾಗಿದೆ ಎಂದು ಹೇಳಿ ಮತ್ತೆ ಎಡವಟ್ಟು ಮಾಡಿಕೊಂಡರು. ಈ ಬಾರಿ ಡಿಎಚ್ಒ ಡಾ. ನೀಲಗುಂದ ಮಧ್ಯಪ್ರವೇಶಿಸಿ, ‘ಅದು 85 ಸಾವಿರ ಅಲ್ಲ, 85 ಲಕ್ಷ’ ಎಂದು ಸರಿಪಡಿಸಿದರು. ಭಾಷಣದುದ್ದಕ್ಕೂ ರಾಮಪ್ಪ ಲಮಾಣಿ ಅವರ ಒಂದರ ಹಿಂದೆ ಒಂದು ಯಡವಟ್ಟುಗಳಿಂದ ಸಭಿಕರು ಮುಸಿಮುಸಿಯಾಗಿ ನಕ್ಕರು. ಈ ಘಟನೆಯು ಕಾರ್ಯಕ್ರಮಕ್ಕೆ ವಿಶೇಷ ಗಮನ ಸೆಳೆದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆಗಿದೆ.