Ashwaveega News 24×7 ಫೆಬ್ರವರಿ 15 -2026 : ನವದೆಹಲಿ : ವಿದೇಶದಿಂದ ಚಿನ್ನ ತರುವ ಪ್ರಯಾಣಿಕರಿಗೆ ಕೇಂದ್ರ ಸರ್ಕಾರ ಮಹತ್ವದ ಸಡಿಲಿಕೆ ನೀಡಿದೆ. ಹೊಸ ಬ್ಯಾಗೇಜ್ ನಿಯಮಗಳ ಪ್ರಕಾರ, ಇನ್ನು ಮುಂದೆ ನಿರ್ದಿಷ್ಟ ಮೌಲ್ಯದ ಮಿತಿ ಇಲ್ಲದೇ ನಿರ್ದಿಷ್ಟ ಪ್ರಮಾಣದ ಚಿನ್ನವನ್ನು ತೆರಿಗೆ ರಹಿತವಾಗಿ ತರಲು ಅವಕಾಶ ಕಲ್ಪಿಸಲಾಗಿದೆ.
ಈ ಹಿಂದೆ ಸುಮಾರು ಒಂದು ಲಕ್ಷ ರೂಪಾಯಿ ಮೌಲ್ಯದ ಚಿನ್ನವರೆಗೆ ಮಾತ್ರ ತರಲು ಅವಕಾಶವಿತ್ತು. ಆದರೆ ಚಿನ್ನದ ಬೆಲೆ ಏರಿಕೆ ಹಿನ್ನೆಲೆಯಲ್ಲಿ ಮೌಲ್ಯದ ಮಿತಿಯನ್ನು ತೆಗೆದುಹಾಕಿ, ತೂಕದ ಆಧಾರದಲ್ಲಿ ನಿಯಮ ಜಾರಿಗೆ ತಂದಿದೆ.
ಹೊಸ ನಿಯಮಗಳ ಪ್ರಕಾರ : ಮಹಿಳೆಯರು ಗರಿಷ್ಠ 40 ಗ್ರಾಂ ವರೆಗೆ ಚಿನ್ನದ ಆಭರಣಗಳನ್ನು ತೆರಿಗೆ ರಹಿತವಾಗಿ ತರಬಹುದು . ಪುರುಷರು ಗರಿಷ್ಠ 20 ಗ್ರಾಂ ವರೆಗೆ ಚಿನ್ನ ತರಲು ಅವಕಾಶವಿದೆ. ಆದರೆ ಈ ಸಡಿಲಿಕೆ ಆಭರಣ ರೂಪದಲ್ಲಿ ತರುವ ಚಿನ್ನಕ್ಕೆ ಮಾತ್ರ ಅನ್ವಯಿಸುತ್ತದೆ. ಚಿನ್ನದ ಗಟ್ಟಿ (ಬಾರ್) ಅಥವಾ ಬಿಸ್ಕತ್ ರೂಪದಲ್ಲಿ ತಂದರೆ ಸಂಬಂಧಿತ ಕಸ್ಟಮ್ಸ್ ಶುಲ್ಕ ವಿಧಿಸಲಾಗುತ್ತದೆ ಎಂದು ಸ್ಪಷ್ಟಪಡಿಸಲಾಗಿದೆ.
ವಿಮಾನ ನಿಲ್ದಾಣಗಳಲ್ಲಿ ಬ್ಯಾಗೇಜ್ ತಪಾಸಣೆ ವೇಳೆ ತೂಕದ ಆಧಾರದಲ್ಲಿ ಪರಿಶೀಲನೆ ನಡೆಯಲಿದೆ. ಮಿತಿಯನ್ನು ಮೀರಿದರೆ ವಿಧಿಸಬಹುದಾದ ತೆರಿಗೆ ಹಾಗೂ ದಂಡ ಅನ್ವಯವಾಗುತ್ತದೆ. ಇದೇ ವೇಳೆ, ವಿದೇಶಗಳಿಂದ ವೈಯಕ್ತಿಕ ಬಳಕೆಗೆ ತರಲಾಗುವ ಲ್ಯಾಪ್ಟಾಪ್ಗಳಿಗೆ ತೆರಿಗೆ ಇಲ್ಲ ಎಂದು ಕೂಡ ಸ್ಪಷ್ಟನೆ ನೀಡಲಾಗಿದೆ.
ಚಿನ್ನದ ಬೆಲೆ ನಿರಂತರ ಏರಿಕೆಯಾಗುತ್ತಿರುವ ಹಿನ್ನೆಲೆ, ಮೌಲ್ಯದ ಮಿತಿಗೆ ಬ್ರೇಕ್ ಹಾಕಿರುವ ಈ ಕ್ರಮವು ಪ್ರಯಾಣಿಕರಿಗೆ ಸಹಾಯಕವಾಗಲಿದೆ ಎಂದು ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.
