Ashwaveega News 24×7 ಫೆಬ್ರವರಿ 15 -2026 : ಕನ್ನಡ ಚಿತ್ರರಂಗದ ಗೋಲ್ಡನ್ ಸ್ಟಾರ್ ಗಣೇಶ್ ಅವರ ಸಿನಿ ಪಯಣಕ್ಕೆ 20 ವರ್ಷಗಳು ಪೂರೈಸಿದ ಸಂಭ್ರಮದ ಮಧ್ಯೆ ಅವರ ಹೊಸ ಸಿನಿಮಾ “ತಮ್ಮ ಸುಖಾಗಮನ ಬಯಸುವ”ಗೆ ಮುಹೂರ್ತ ನೆರವೇರಿತು.
ತಮ್ಮ ಸುಖಾಗಮನ ಬಯಸುವ ಚಿತ್ರವು “ಹೊಂದಿಸಿ ಬರೆಯಿರಿ” ಹಾಗೂ “ತೀರ್ಥರೂಪ ತಂದೆಯವರಿಗೆ” ಚಿತ್ರಗಳ ನಿರ್ದೇಶಕ ರಾಮೇನಹಳ್ಳಿ ಜಗನ್ನಾಥ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿದೆ. ವೈಷ್ಣವಿ ಫಿಲಂಸ್ ಬ್ಯಾನರ್ನಲ್ಲಿ ವಿಜಯ್ ಲೋಹಿತ್ ನಿರ್ಮಾಣ ಮಾಡುತ್ತಿದ್ದು, ಸತೀಶ್ ಎಚ್ ಗೌಡ ಸಹ ನಿರ್ಮಾಪಕರಾಗಿದ್ದಾರೆ.
ಮಹಾ ಶಿವರಾತ್ರಿಯ ಶುಭ ದಿನದಂದು ಕಂಠೀರವ ಸ್ಟುಡಿಯೋದಲ್ಲಿ ನಡೆದ ಮುಹೂರ್ತ ಸಮಾರಂಭದಲ್ಲಿ ಶಿಲ್ಪ ಗಣೇಶ್ ಚಾಲನೆ ನೀಡಿದರು . ಚಿತ್ರತಂಡದ ಸದಸ್ಯರು, ಅಭಿಮಾನಿಗಳು ಹಾಗೂ ಸ್ನೇಹಿತರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

2006ರಲ್ಲಿ ಬಿಡುಗಡೆಯಾದ ಮುಂಗಾರು ಮಳೆ ಚಿತ್ರ ಬಿಡುಗಡೆಯಾದಾಗ ನಾನು ಎಂಜಿನಿಯರಿಂಗ್ ವಿದ್ಯಾರ್ಥಿ. ಆ ಸಿನಿಮಾವನ್ನು ಅನೇಕ ಬಾರಿ ನೋಡಿದ್ದೇನೆ. ಇಂದು ಗಣೇಶ್ ಅವರೊಂದಿಗೆ ಸಿನಿಮಾ ಮಾಡುತ್ತಿರುವುದು ನನಗೆ ವಿಶೇಷ ಸಂತೋಷ ತಂದಿದೆ ಎಂದು ನಿರ್ದೇಶಕ ರಾಮೇನಹಳ್ಳಿ ಜಗನ್ನಾಥ ಹೇಳಿದರು …

“ಮುಂಗಾರು ಮಳೆ” ಬಿಡುಗಡೆಯಾಗಿ ಈಗ 20 ವರ್ಷಗಳಾಗಿವೆ. ಕಾಲ ಹೇಗೆ ಹೋಯಿತು ಗೊತ್ತಾಗಲಿಲ್ಲ. ದೇವರು ಒಳ್ಳೆಯ ನಿರ್ಮಾಪಕರು, ನಿರ್ದೇಶಕರು ಹಾಗೂ ಅಭಿಮಾನಿಗಳ ಪ್ರೀತಿ ಕೊಟ್ಟಿದ್ದಾನೆ. ಅದು ಹೀಗೆ ಮುಂದುವರೆಯಲಿ” ಎಂದು ಗಣೇಶ್ ಹೇಳಿದರು.
“ಜಗನ್ನಾಥ ಅವರು ಕಥೆ ಹೇಳುವಾಗಲೇ ಭಾವನಾತ್ಮಕವಾಗಿ ಕಣ್ಣೀರಾಯಿತು. ಅಪರೂಪದ ಕಥೆ ಇದು. ಕೌಟುಂಬಿಕ ಸಿನಿಮಾ ಆದರೂ, ಪ್ರೇಕ್ಷಕರಿಗೆ ಬೇಕಾದ ಎಲ್ಲಾ ಅಂಶಗಳಿವೆ. ಅರ್ಜುನ್ ಜನ್ಯ ಮತ್ತು ನನ್ನ ಕಾಂಬಿನೇಶನ್ನಲ್ಲಿ ಸಾಕಷ್ಟು ಹಿಟ್ ಹಾಡುಗಳು ಬಂದಿವೆ. ಈ ಚಿತ್ರದಲ್ಲೂ ಸುಮಧುರ ಗೀತೆಗಳು ಇರಲಿವೆ” ಎಂದು ಭರವಸೆ ನೀಡಿದರು .

“ಇದು ನಮ್ಮ ಸಂಸ್ಥೆಯ ಎರಡನೇ ಚಿತ್ರ. ಮೊದಲ ಸಿನಿಮಾಗೆ ನೀಡಿದ ಪ್ರೋತ್ಸಾಹ ಈ ಚಿತ್ರಕ್ಕೂ ಮುಂದುವರಿಯಲಿ” ಎಂದು ನಿರ್ಮಾಪಕ ವಿಜಯ್ ಲೋಹಿತ್ ಮನವಿ ಮಾಡಿದರು.
ಒಟ್ಟಿನಲ್ಲಿ, ಗೋಲ್ಡನ್ ಸ್ಟಾರ್ ಗಣೇಶ್ ಅವರ 20 ವರ್ಷಗಳ ಸಿನಿ ಪಯಣದ ಸಂಭ್ರಮದಲ್ಲಿ ಆರಂಭವಾದ “ತಮ್ಮ ಸುಖಾಗಮನ ಬಯಸುವ” ಚಿತ್ರ ಈಗಲೇ ಸಿನಿಪ್ರಿಯರಲ್ಲಿ ಕುತೂಹಲ ಮೂಡಿಸಿದೆ.
