
veteran lyricist doddarange gowda hospitalized
ಕನ್ನಡ ಸಿನಿಮಾ ಮತ್ತು ಸಾಹಿತ್ಯ ಲೋಕಕ್ಕೆ ಅಪಾರ ಕೊಡುಗೆ ನೀಡಿರುವ ಪ್ರೊಫೆಸರ್ ದೊಡ್ಡರಂಗೇಗೌಡ ಅವರ ಆರೋಗ್ಯದಲ್ಲಿ ಏರುಪೇರು ಉಂಟಾಗಿದೆ. ತೀವ್ರ ಅನಾರೋಗ್ಯದಿಂದ ಬಳಲುತ್ತಿರುವ ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ದೊಡ್ಡರಂಗೇಗೌಡ ಅವರಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಸಚಿವ ಶಿವರಾಜ ತಂಗಡಗಿ ಮುಂತಾದವರು ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದಾರೆ. ದೊಡ್ಡರಂಗೇಗೌಡ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಫೋಟೋ ಲಭ್ಯವಾಗಿದೆ. ಅವರು ಬೇಗ ಗುಣಮಖರಾಗಲಿ ಎಂದು ಆಪ್ತರು ಮತ್ತು ಅಭಿಮಾನಿಗಳು ಪ್ರಾರ್ಥಿಸುತ್ತಿದ್ದಾರೆ.
ಪ್ರೊಫೆಸರ್ ದೊಡ್ಡರಂಗೇಗೌಡ ಅವರಿಗೆ ಈಗ 79 ವರ್ಷ ವಯಸ್ಸು. ಇತ್ತೀಚೆಗೆ ಅವರು ಮಂಡಿ ನೋವಿನಿಂದ ಬಳಲುತ್ತಿದ್ದರು. ಪ್ರಸ್ತುತ ಅವರ ಆರೋಗ್ಯದಲ್ಲಿ ತೀವ್ರ ಏರುಪೇರು ಉಂಟಾಗಿದೆ. ಹೆಲ್ತ್ ಅಪ್ಡೇಟ್ಗಾಗಿ ನಿರೀಕ್ಷಿಸಲಾಗುತ್ತಿದೆ. ಸರ್ಕಾರದಿಂದ ಅವರಿಗೆ ಎಲ್ಲ ರೀತಿಯ ನೆರವು ನೀಡುವುದಾಗಿ ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ಅವರು ತಿಳಿಸಿದ್ದಾರೆ.
ದೊಡ್ಡರಂಗೇಗೌಡ ಜನಪ್ರಿಯ ಗೀತೆಗಳು: ಚಂದನವನದಲ್ಲಿ ಎಂದೂ ಮರೆಯಲಾಗದ ಗೀತೆಗಳಿಗೆ ಪ್ರೊಫೆಸರ್ ದೊಡ್ಡರಂಗೇಗೌಡ ಅವರು ಸಾಹಿತ್ಯ ಬರೆದಿದ್ದಾರೆ. ಅವರು ಬರೆದ ಹಾಡುಗಳು ಎವರ್ಗ್ರೀನ್ ಆಗಿ ಉಳಿದುಕೊಂಡಿವೆ.
‘ಆಲೆಮನೆ’ ಸಿನಿಮಾದ ‘ನಮ್ಮೂರ ಮಂದಾರ ಹೂವೆ..’, ‘ಪರಸಂಗದ ಗೆಂಡೆತಿಮ್ಮ’ ಸಿನಿಮಾದ ‘ನೋಟದಾಗೆ ನಗೆಯ ಮೀಟಿ..’, ‘ತೇರ ಏರಿ ಅಂಬರದಾಗೆ ನೇಸರ ನಗುತಾನೆ..’, ‘ಪಡುವಾರಹಳ್ಳಿ ಪಾಂಡವರು’ ಚಿತ್ರದ ‘ಜನ್ಮ ನೀಡಿದ ಭೂ ತಾಯಿಯ..’ ಸೇರಿದಂತೆ ನೂರಾರು ಸೂಪರ್ ಹಿಟ್ ಹಾಡುಗಳನ್ನ ಪ್ರೊಫೆಸರ್ ದೊಡ್ಡರಂಗೇಗೌಡ ಅವರು ಬರೆದಿದ್ದಾರೆ.