
mysuru our government is solid like a rock says siddaramaiah
ನಾನು ಡಿ ಕೆ ಶಿವಕುಮಾರ್ ಚೆನ್ನಾಗಿಯೇ ಇದ್ದೇವೆ, ನಮ್ಮ ಸರ್ಕಾರ 5 ವರ್ಷ ಬಂಡೆಯ ರೀತಿ ಭದ್ರವಾಗಿ ಇರುತ್ತದೆ ಎಂದು ಡಿಕೆ ಶಿವಕುಮಾರ್ ಕೈಹಿಡಿದು ಘೋಷಿಸಿದ ಸಿಎಂ ಸಿದ್ದರಾಮಯ್ಯ, ನಮ್ಮಬ್ಬರ ನಡುವೆ ತಂದಾಕುವ ಪ್ರಯತ್ನ ಮಾಡಿದರೂ ಅದು ಆಗುವುದಿಲ್ಲ ಎಂದು ಪ್ರತಿಪಕ್ಷಗಳಿಗೆ ತಿರುಗೇಟು ನೀಡಿದರು.
ಇಲ್ಲಿನ ವಿಮಾನ ನಿಲ್ದಾಣದಲ್ಲಿ ಸೋಮವಾರ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಜೊತೆ ಕೈ ಹಿಡಿದು ಒಗ್ಗಟ್ಟು ಪ್ರದರ್ಶಿಸಿದ ಅವರು ‘ ನಮ್ಮ ಬಗ್ಗೆ ಮಾತನಾಡುವ ಶ್ರೀರಾಮುಲು ಎಷ್ಟು ಚುನಾವಣೆ ಸೋತಿದ್ದಾರೆ. ಬಿಜೆಪಿಯವರು ಸುಳ್ಳು ಹೇಳುವುದರಲ್ಲಿ ನಿಸ್ಸೀಮರು. ನಾನು ಈ ಬಾರಿಯ ದಸರಾ ಉದ್ಘಾಟಿಸುವುದು ಸತ್ಯ’ ಎಂದರು.
‘ರಣದೀಪಸಿಂಗ್ ಸುರ್ಜೇವಾಲ ಈ ರಾಜ್ಯದ ಕಾಂಗ್ರೆಸ್ ಉಸ್ತುವಾರಿ. ಅವರು ನಮ್ಮ ಪಕ್ಷದ ಶಾಸಕರ ಕಷ್ಟ-ಸುಖ ಕೇಳುತ್ತಾರೆ. ಅದರಲ್ಲಿ ವಿಶೇಷವೇನಿಲ್ಲ’ ಎಂದರು. ಕೆಲವು ದಿನಗಳಿಂದ ಪವರ್ ಸೆಂಟರ್ ಬದಲಾವಣೆ, ಕ್ರಾಂತಿ, 3 ತಿಂಗಳಲ್ಲಿ ಅಧಿಕಾರ ಕಳೆದುಕೊಳ್ಳಲಿರುವ ಸಿದ್ದರಾಮಯ್ಯ ಹೀಗೆ ವಿವಿಧ ವಿಚಾರಗಳು ಚರ್ಚೆಯಾಗುತ್ತಿದ್ದು, ಇದಕ್ಕೆ ಮೈಸೂರಿನಲ್ಲಿ ಸಿಎಂ ಸಿದ್ದರಾಮಯ್ಯ ಸೂಕ್ತ ಉತ್ತರ ಕೊಟ್ಟು, ಟೀಕಿಸುವವರು ಬಾಯಿ ಮುಚ್ಚಿಸಲು ಯತ್ನಿಸಿದರು.
ಕೆಆರ್ ಎಸ್ ಗೆ ಬಾಗೀನ ಅರ್ಪಿಸುವ ಹಿನ್ನೆಲೆಯಲ್ಲಿ ಸೋಮವಾರ ಮೈಸೂರು ವಿಮಾನ ನಿಲ್ದಾಣಕ್ಕರ ಆಗಮಿಸಿದ ಸಿಎಂ ಸಿದ್ದರಾಮಯ್ಯ ಮಾಧ್ಯಮದವರೊಂದಿಗೆ ಮಾತನಾಡಿದರು. ಹಾಸನ ಜಿಲ್ಲೆಯಲ್ಲಿ ಹೃದಾಯಘಾತ ಪ್ರಕರಣಗಳು ಹೆಚ್ಚಾಗುತ್ತಿರುವ ಬಗ್ಗೆ ಮಾತನಾಡಿ ಅದರ ಬಗ್ಗೆ ಪರಿಶೀಲನೆ ನಡೆಸುತ್ತೇನೆ. ಹೃದಯಾಘಾತ ಹೆಚ್ಚಾಗಲು ಕಾರಣ ಏನು ಎಂಬುದಕ್ಕೆ ತಜ್ಞರ ಮೂಲಕ ಮಾಹಿತಿ ತರಿಸಿಕೊಳ್ಳುತ್ತೇನೆ. ಅದರ ನಿಯಂತ್ರಣಕ್ಕೆ ಸೂಕ್ತ ಕ್ರಮ ಕೈಗೊಳ್ಖುತ್ತೇನೆ ಎಂದರು.