
fatal attack on a young man video viral in soladevanahalli
(ಅಶ್ವವೇಗ) Ashwaveega News 24×7 ಜು.07: “ನನ್ನ ಹುಡುಗಿಗೆ ಫೋನ್, ಮೆಸೆಜ್ ಮಾಡ್ತೀಯಾ” ಅಂತ ಯುವಕನೊಬ್ಬನ ಮೇಲೆ ಪುಂಡರ ಗ್ಯಾಂಗ್ ಅಮಾನವೀಯವಾಗಿ ಹಲ್ಲೆ ನಡೆಸಿದ ಘಟನೆ ನಗರದ ಹೊರವಲಯದ ಸೋಲದೇವನಹಳ್ಳಿಯಲ್ಲಿ ನಡೆದಿದೆ. ಕುಶಾಲ್ ಎಂಬಾತನ ಮೇಲೆ ಹಲ್ಲೆ ನಡೆದಿದೆ. ಕಾಲೇಜಿಗೆ ಹೋಗುವಾಗ ಕುಶಾಲ್ ಹಾಗೂ ಯುವತಿ ಮಧ್ಯೆ ಪ್ರೀತಿಯಾಗಿತ್ತು. ಎರಡು ವರ್ಷದ ಪ್ರೀತಿ ಕೆಲ ತಿಂಗಳ ಹಿಂದೆ ಮುರಿದು ಬಿದ್ದಿತ್ತು. ಈ ಸಮಯದಲ್ಲಿ ಯುವತಿಗೆ ಬೇರೊಂದು ಹುಡುಗನ ಪರಿಚಯವಾಗಿತ್ತು. ಇದರಿಂದ ಕುಶಾಲ್ ಯುವತಿಗೆ ಅಶ್ಲೀಲ ಮೆಸೆಜ್ ಮಾಡಿದ್ದ ಎನ್ನಲಾಗಿದೆ.
ಇದೇ ಕಾರಣಕ್ಕೆ ಮಾತುಕತೆಗೆ ಕರೆಸಿ, ಯುವತಿ ತನ್ನ ಗೆಳೆಯ ಹಾಗೂ ಸ್ನೇಹಿತರ ಜೊತೆ ಸೇರಿ ಆತನನ್ನು ಕಾರಿನಲ್ಲಿ ಅಪಹರಿಸಿ, ನಿರ್ಜನ ಪ್ರದೇಶಕ್ಕೆ ಕೆರದೊಯ್ದು ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾರೆ. ಹಲ್ಲೆ ಮಾಡಿದ್ದ ಕೇಸ್ಗೆ ಸಂಬಂಧಿಸಿದಂತೆ ಪ್ರಕರಣದ ಸೂತ್ರಧಾರಿ 17 ವರ್ಷದ ಹುಡಗಿಯನ್ನು ಸೋಲದೇವನಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಇನ್ನು ಹಲ್ಲೆ ವೇಳೆ ಪುಂಡರು ಕೊಲೆಯಾದ ಚಿತ್ರದುರ್ಗದ ರೇಣುಕಾಸ್ವಾಮಿ ಹೆಸರು ಉಲ್ಲೇಖಿಸಿದ್ದಾರೆ. ರೇಣುಕಾಸ್ವಾಮಿ ಕೊಲೆ ಕೇಸ್ನಂತೆ ಇದು ಆಗುತ್ತೆ. ಎ1 ಹೇಮಂತ್, ಎ 2 ನಾನು ಎಂದು ಯುವಕನನ್ನು ಬೆತ್ತಲೆ ಮಾಡಿ, 8-10 ಯುವಕರು ಸೇರಿ ಹಲ್ಲೆ ಮಾಡಿ ವಿಡಿಯೋ ಮಾಡಿದ್ದಾರೆ. ಅಲ್ಲದೇ ಯುವಕನ ಮರ್ಮಾಂಗ ತುಳಿದು ವಿಕೃತಿ ಮೆರೆದಿದ್ದಾರೆ. ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಆರೋಪಿಗಳಾದ ಹೇಮಂತ್, ಯಶ್ವಂತ್, ಶಿವಶಂಕರ್, ಶಶಾಂಕ್ ಗೌಡ ಎಂಬವರನ್ನು ಬಂಧಿಸಲಾಗಿದೆ.
17 ವರ್ಷದ ಹುಡಗಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವಾಗಲೇ ಯುವಕ ಕುಶಾಲ್ನ ಪರಿಚಯವಾಗಿದೆ. ಪರಿಚಯ ಪ್ರೇಮಕ್ಕೆ ತಿರುಗಿದೆ. ಹುಡುಗಿ ಶಾಲೆ ಮುಗಿಸಿಕೊಂಡು ಕಾಲೇಜು ಮೆಟ್ಟಿಲು ಹತ್ತಿದ ಮೇಲೆ ಪ್ರೇಮಿಗಳ ನಡುವೆ ಬಿರುಕು ಮೂಡಿದೆ. ಎರಡು ವರ್ಷದ ಪ್ರೀತಿ ಕೆಲ ದಿನಗಳ ಹಿಂದೆಯಷ್ಟೇ ಬ್ರೇಕ್ ಅಪ್ ಆಗಿದೆ. ಬ್ರೇಕ್ ಅಪ್ ಆದ ಬಳಿಕ ಯುವಕ ಕುಶಾಲ್ ಖಾಸಗಿ ಕ್ಷಣದ ಫೋಟೋಗಳನ್ನು ವೈರಲ್ ಮಾಡುವುದಾಗಿ ಹುಡುಗಿಗೆ ಬ್ಲ್ಯಾಕ್ ಮೇಲ್ ಮಾಡಿದ್ದಾನೆ.
ಈ ವಿಚಾರವನ್ನು ಹುಡುಗಿ ತನ್ನ ಸ್ನೇಹಿತರ ಮುಂದೆ ಹೇಳಿದ್ದಾಳೆ. ಅಲ್ಲದೆ, ಕುಶಾಲ್ನನ್ನು ಅಪಹರಿಸುವಂತೆ ಹುಡುಗಿ ತನ್ನ ಸ್ನೇಹಿತರಿಗೆ ಹೇಳಿದ್ದಾಳೆ. ಅದರಂತೆ ಹುಡುಗಿಯ ಸ್ನೇಹಿತರು, ಕುಶಾಲ್ನನ್ನು ಸಂಪರ್ಕಿಸಿ ಮಾತುಕತೆ ಮೂಲಕ ಬಗೆಹರಿಸಿಕೊಳ್ಳೋಣ ಬಾ ಅಂತ ಬಾಗಲಗುಂಟೆಯ ಎಜಿಪಿ ಲೇಔಟ್ಗೆ ಕರೆಸಿಕೊಂಡಿದ್ದಾರೆ. ಸ್ಥಳಕ್ಕೆ ಬಂದ ಯುವಕ ಕುಶಾಲ್ನನ್ನು ಹುಡುಗಿಯ ಸ್ನೇಹಿತರು ಅಪಹರಿಸಿದ್ದಾರೆ.
ಪ್ರಕರಣ ಸಂಬಂಧ ಹುಡುಗಿ ಸೇರಿದಂತೆ 11 ಜನರನ್ನು ಸೋಲದೇವನಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಇವರಲ್ಲಿ 8 ಜನ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ. ಆರೋಪಿಗಳಾದ ಶಶಾಂಕ್ ಗೌಡ, ಸಲ್ಮಾನ್, ಯಶ್ವಂತ್, ವಿದ್ಯಾರ್ಥಿಗಳಾದ ತೇಜಸ್, ರಾಕೇಶ್, ರಾಹುಲ್ ಮತ್ತು ಹೇಮಂತ್ ಬಿಡುಗಡೆಯಾದವರು. ಆರೋಪಿ ಹೇಮಂತ ಈ ಹಿಂದೆ ಹಲವು ಬಾರಿ ಹಲ್ಲೆ ಪ್ರಕರಣದಲ್ಲಿ ಪೊಲೀಸ್ ಠಾಣೆ ಮೆಟ್ಟಿಲೇರಿ ಬಂದಿದ್ದಾನೆ.