
poisoning confirmed as cause-of death of five-tigers in chamarajanagara
ಮಲೆ ಮಹದೇಶ್ವರ ವನ್ಯಜೀವಿಧಾಮದಲ್ಲಿ ಮೃತಪಟ್ಟ ಐದು ಹುಲಿಗಳ ಸಾವಿಗೆ ವಿಷಪ್ರಾಶನವೇ ಕಾರಣ ಎಂಬುದು ದೃಢಪಟ್ಟಿದೆ. ಈ ಕುರಿತು ಮಾಹಿತಿ ನೀಡಿರುವ ಚಾಮರಾಜನಗರ ಸಿಸಿಎಫ್ ಹೀರಾಲಾಲ್ ಅವರು, ಮೃತ ತಾಯಿ ಹುಲಿಗೆ 8 ವರ್ಷಗಳಾಗಿದ್ದು, ಮರಿಗಳು ಸುಮಾರು 10 ತಿಂಗಳು ವಯೋಮಾನದವಾಗಿವೆ ಎಂದು ತಿಳಿಸಿದ್ದಾರೆ.
ಪ್ರಕರಣ ಸಂಬಂಧ ಐವರು ದನಗಾಹಿಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ. ಹುಲಿಗಳ ಕಳೇಬರ ಪತ್ತೆಯಾದ ಅಣತಿ ದೂರದಲ್ಲೇ ಹಸುವಿನ ಮೃತದೇಹ ಸಿಕ್ಕಿದ್ದು, ಕ್ರಿಮಿನಾಶಕ ಸಿಂಪಡಣೆ ಮಾಡಿರುವುದು ತಿಳಿದುಬಂದಿದೆ. ವಿಷ ಹಾಕಿದ್ದ ಹಸುವನ್ನು ತಿಂದು ಹುಲಿಗಳು ಅಸುನೀಗಿರುವುದು ದೃಢವಾಗಿದ್ದು, ಹಸು ಬೇಟೆಯಾಡಿದ ಕೋಪಕ್ಕೆ ದನಗಾಹಿಗಳೇ ವಿಷ ಇಟ್ಟರೇ, ಇಲ್ಲವೇ ಬೇಟೆಗಾರರು ವಿಷ ಇಟ್ಟಿದ್ದಾರೆಯೇ ಎಂಬುದು ತನಿಖೆಯಿಂದ ತಿಳಿದುಬರಬೇಕಿದೆ.
ಅಲ್ಲದೆ, ಘಟನಾ ಸ್ಥಳದಲ್ಲಿ ಸಿಕ್ಕ ಹಸುವಿನ ಮೃತದೇಹದ ಮಾಲೀಕನ ಪತ್ತೆ ಕಾರ್ಯ ಮುಂದುವರೆದಿದೆ. ಹಸುವಿನ ಮಾಲೀಕ ಯಾರೆಂಬುದು ಇನ್ನೂ ಖಚಿತವಾಗಿಲ್ಲ. ಸ್ಥಳಕ್ಕೆ ಶ್ವಾನದಳವೂ ಭೇಟಿ ನೀಡಿ ತನಿಖೆ ಕೈಗೊಂಡಿದ್ದು, ಸರ್ಕಾರ ನೇಮಿಸಿರುವ ತನಿಖಾ ತಂಡದವರೂ ಸ್ಥಳ ಪರಿಶೀಲನೆ ನಡೆಸುತ್ತಿದ್ದಾರೆ.
ಮಲೆ ಮಹದೇಶ್ವರ ವನ್ಯಜೀವಿಧಾಮ ಮತ್ತು ಕಾವೇರಿ ವನ್ಯಜೀವಿಧಾಮದಲ್ಲಿ ಬಹುಪಾಲು ಕುಟುಂಬಕ್ಕೆ ಹೈನುಗಾರಿಕೆಯೇ ಮುಖ್ಯ ಕಸುಬಾಗಿದೆ. ಕಾಡಂಚಿನ ಪ್ರದೇಶದಲ್ಲಿ ಜಾನುವಾರುಗಳನ್ನು ಮೇಯಲು ಬಿಡುವ ಪರಿಪಾಠವಿದೆ. ಈ ವೇಳೆ, ವನ್ಯಜೀವಿಗಳ ದಾಳಿಗೆ ಜಾನುವಾರುಗಳು ಬಲಿಯಾಗಿರುವ ಘಟನೆಗಳು ನಡೆದಿವೆ. ಈಗ ಹುಲಿಗಳ ಸಾವಿಗೆ ಕಾರಣ ಏನೆಂಬುದರ ಕುರಿತು ತನಿಖೆ ನಡೆಯುತ್ತಿದೆ.