Ashwaveega News 24×7 ಫೆಬ್ರವರಿ 14 -2026 – ಬೆಂಗಳೂರು : ಪ್ರಜ್ವಲ್ ದೇವರಾಜ್ ಹಾಗೂ ಮೇಘ ಶೆಟ್ಟಿ ನಾಯಕ–ನಾಯಕಿಯಾಗಿ ಅಭಿನಯಿಸಿರುವ “ಚೀತಾ” ಚಿತ್ರದ ಚಿತ್ರೀಕರಣ ಸಂಪೂರ್ಣಗೊಂಡಿದೆ. ನೃತ್ಯ ನಿರ್ದೇಶಕರಾಗಿ 25 ವರ್ಷಗಳ ಅನುಭವ ಹೊಂದಿರುವ ರಾಜಾ ಕಲೈ ಕುಮಾರ್ ಅವರ ಪ್ರಥಮ ನಿರ್ದೇಶನದ ಚಿತ್ರ ಇದಾಗಿದೆ. ರಾಜಲಕ್ಷ್ಮಿ ಎಂಟರ್ಟೈನ್ಮೆಂಟ್ ಲಾಂಛನದಲ್ಲಿ ಶ್ರೀಮತಿ ಪ್ರತಿಭಾ ನಿರ್ಮಿಸಿರುವ ಈ ಚಿತ್ರದ ಕೊನೆಯ ಹಂತದ ಚಿತ್ರೀಕರಣ ರಾಕ್ಲೈನ್ ಸ್ಟುಡಿಯೋದಲ್ಲಿ ನಿರ್ಮಿಸಿದ್ದ ಅದ್ದೂರಿ ಸೆಟ್ನಲ್ಲಿ ಯುಗಳಗೀತೆಯೊಂದಿಗೆ ನೆರವೇರಿತು.
“ನಾನು ಚಿತ್ರರಂಗಕ್ಕೆ ಬಂದು 25 ವರ್ಷಗಳಾಗಿವೆ. ನೃತ್ಯ ಕಲಾವಿದನಾಗಿ ಹಾಗೂ ನೃತ್ಯ ನಿರ್ದೇಶಕನಾಗಿ ಕೆಲಸ ಮಾಡಿದ್ದೇನೆ. ‘ಚೀತಾ’ ನನ್ನ ನಿರ್ದೇಶನದ ಮೊದಲ ಸಿನಿಮಾ. ಮಾರುಕಟ್ಟೆ ಹಿನ್ನೆಲೆಯಲ್ಲೇ ಸಾಗುವ ಕಥೆಯಿದು.

ಮಾರುಕಟ್ಟೆಯಲ್ಲಿ ಹುಟ್ಟಿ ಬೆಳೆದ ಹುಡುಗನೊಬ್ಬನ ಬದುಕಿನ ಕಥೆ ಇದಾಗಿದೆ. ಆ ಪಾತ್ರವನ್ನು ಪ್ರಜ್ವಲ್ ದೇವರಾಜ್ ಮಾಡಿದ್ದಾರೆ. ಮಾರುಕಟ್ಟೆಯಲ್ಲಿ ನಡೆಯುವ ಅವ್ಯವಹಾರಗಳ ವಿರುದ್ಧ ಹೋರಾಡುವ ಹೋರಾಟಗಾರನ ಪಾತ್ರ ಇದು. ಪ್ರೀತಿ, ಸೆಂಟಿಮೆಂಟ್, ಆಕ್ಷನ್ ಸೇರಿದಂತೆ ಎಲ್ಲ ವಾಣಿಜ್ಯ ಅಂಶಗಳೂ ಚಿತ್ರದಲ್ಲಿವೆ,” ಎಂದು ನಿರ್ದೇಶಕ ರಾಜಾ ಕಲೈ ಕುಮಾರ್ ಹೇಳಿದರು .
ಕಲಾ ನಿರ್ದೇಶಕ ಶಿವಕುಮಾರ್ ಅವರ ನೇತೃತ್ವದಲ್ಲಿ ಹೆಚ್ ಎಂ ಟಿ ಆವರಣದಲ್ಲಿ ಭಾರೀ ಸೆಟ್ ನಿರ್ಮಿಸಿ ಹೆಚ್ಚಿನ ಚಿತ್ರೀಕರಣ ನಡೆಸಲಾಗಿದೆ. ರಾಮನಗರ ಮತ್ತು ಕೋಲಾರದಲ್ಲಿಯೂ ಚಿತ್ರೀಕರಣ ನಡೆದಿದ್ದು, ಚಿತ್ರದಲ್ಲಿ ಐದು ಹಾಡುಗಳು ಹಾಗೂ ಆರು ಸಾಹಸ ಸನ್ನಿವೇಶಗಳಿವೆ. ದಿನವೂ ಸುಮಾರು 150 ರಿಂದ 200 ಸಹ ಕಲಾವಿದರು ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದರು .

ಚಿತ್ರದಲ್ಲಿ ರಂಗಾಯಣ ರಘು, ಶೃತಿ ಹರಿಹರನ್, ಚಿನ್ನಿ ಪ್ರಕಾಶ್, ಗುರು ಜಗ್ಗೇಶ್, ಶಿವರಾಜ್ K.R. ಪೇಟೆ, ಟೆನ್ನಿಸ್ ಕೃಷ್ಣ ಸೇರಿದಂತೆ ಅನೇಕ ಕಲಾವಿದರು ಅಭಿನಯಿಸಿದ್ದಾರೆ.
“ಮಾರ್ಕೆಟ್ನಲ್ಲಿ ಬೆಳೆದ ಅನಾಥ ಹುಡುಗನ ಪಾತ್ರ ನನ್ನದು. ಜಾತಿ–ಮತ ಭೇದವಿಲ್ಲದೆ ಎಲ್ಲರೂ ನನ್ನನ್ನು ಪ್ರೀತಿಸುವ ಪಾತ್ರ. ಅಲ್ಲಿನ ಕೆಮಿಕಲ್ ಮಾಫಿಯಾ ಸೇರಿದಂತೆ ಅನೇಕ ಅವ್ಯವಹಾರಗಳ ವಿರುದ್ಧ ಹೋರಾಡುತ್ತೇನೆ. ‘ಚೀತಾ’ ಅಬ್ಬರವನ್ನು ಟೀಸರ್ ಮತ್ತು ಟ್ರೇಲರ್ನಲ್ಲಿ ಕಾಣಬಹುದು,” ಎಂದು ನಾಯಕ ಪ್ರಜ್ವಲ್ ದೇವರಾಜ್ ಹೇಳಿದರು.

ನಾಯಕಿ ಮೇಘ ಶೆಟ್ಟಿ ಮಾತನಾಡಿ, “ನಾನು ಈವರೆಗೆ ಮಾಡದ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಈ ಅವಕಾಶಕ್ಕಾಗಿ ನಿರ್ದೇಶಕರಿಗೂ ನಿರ್ಮಾಪಕರಿಗೂ ಧನ್ಯವಾದ,” ಎಂದರು.
ನಿರ್ಮಾಪಕಿ ಪ್ರತಿಭಾ ಮಾತನಾಡಿ, “ನಿರ್ದೇಶಕರು ಚಿತ್ರವನ್ನು ಅಂದವಾಗಿ ಪೂರ್ಣಗೊಳಿಸಿದ್ದಾರೆ. ಎಲ್ಲಾ ಕಲಾವಿದರು ಹಾಗೂ ತಂತ್ರಜ್ಞರು ಉತ್ತಮವಾಗಿ ಕೆಲಸ ಮಾಡಿದ್ದಾರೆ. ಇಡೀ ತಂಡಕ್ಕೆ ಧನ್ಯವಾದಗಳು,” ಎಂದು ಹೇಳಿದರು.
