ಭಾರತೀಯ ಜನತಾ ಪಕ್ಷ(ಬಿಜೆಪಿ) ರಾಜ್ಯ ಘಟಕದಲ್ಲಿ ಕಳೆದ ಒಂದು, ಒಂದೂವರೆ ವರ್ಷದಿಂದ ನಿರಂತರವಾಗಿ ನಡೆಯುತ್ತಿರುವ ಅಧ್ಯಕ್ಷ ಸ್ಥಾನದ ಕಿತ್ತಾಟ ತಾರ್ಕಿಕ ಅಂತ್ಯ ಕಾಣುವ ಯಾವುದೇ ಲಕ್ಷಣಗಳೂ ಸದ್ಯಕ್ಕೆ ಕಂಡು ಬರುತ್ತಿಲ್ಲ. ಬಿಜೆಪಿ ಮೊದಲಿನಿಂದಲೂ ಶಿಸ್ತಿನ ಪಕ್ಷ ಎಂದೇ ಹೆಸರಾಗಿದ್ದು, ಇತ್ತೀಚೆಗಂತೂ ಪ್ರತಿಯೊಬ್ಬ ನಾಯಕರೂ ಮೇಲಿಂದ ಮೇಲೆ ನಮ್ಮದು ಶಿಸ್ತಿನ ಪಕ್ಷ, ನಾವು ಶಿಸ್ತಿನ ಸಿಪಾಯಿಗಳು, ನಮ್ಮಲ್ಲಿ ಆಂತರಿಕ ಪ್ರಜಾಪ್ರಭುತ್ವ ಹೆಚ್ಚಿನ ಪ್ರಮಾಣದಲ್ಲಿರುವುದರಿಂದ ನಾವು ಪರಸ್ಪರ ವಾದ ಮಾಡುವುದು ಸಾಮಾನ್ಯವಾಗಿರುತ್ತದೆ ಎಂದು ಹೇಳುತ್ತಲೇ ತಮಗೆ ಬೇಕಾದಂತೆ ಸ್ವೇಚ್ಛಾಚಾರದಲ್ಲಿ ತೊಡಗಿರುವುದು ಒಳ್ಳೆಯ ಲಕ್ಷಣವೇನೂ ಅಲ್ಲ ಮತ್ತು ಅದು ಪಕ್ಷಕ್ಕೆ ಶೋಭೆಯನ್ನೂ ತರುವುದಿಲ್ಲ. ಇದು ಚರ್ಚೆ, ವಾದ ಅಲ್ಲ, ವಿವಾದ. ವಿವಾದ ಪ್ರಜಾತಂತ್ರದ ಲಕ್ಷಣವಲ್ಲ.
ಕಳೆದ ಲೋಕಸಭಾ ಚುನಾವಣೆ, ವಿಧಾನಸಭಾ ಚುನಾವಣೆಗಳಲ್ಲಿಯೂ ಪಕ್ಷದ ನಾಯಕರು ತಾವು ಶಿಸ್ತಿನ ಶಿಪಾಯಿಗಳು, ಶಿಸ್ತಿನ ಪಕ್ಷ ಬಿಜೆಪಿ ಎಂದು ಸಾರುತ್ತಲೇ ಆ ಪಕ್ಷದಲ್ಲಿ ಅಶಿಸ್ತಿನ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದುದು ಎಲ್ಲರಿಗೂ ಗೊತ್ತಿರುವ ವಿಷಯವೇ ಆಗಿದೆ. ಹಿರಿಯ ನಾಯಕರಾದ ಹಾಲಿ ಸಂಸದ ಜಗದೀಶ್ ಶೆಟ್ಟರ್ ತಮಗೆ ವಿಧಾನಸಭೆಯ ಚುನಾವಣೆಗೆ ಟಿಕೆಟ್ ದೊರೆಯಲಿಲ್ಲ ಎಂಬ ಕಾರಣಕ್ಕೆ ಮಾತೃಪಕ್ಷ ಬಿಜೆಪಿಯನ್ನು ತೊರೆದು ಬಿಜೆಪಿಯ ವೈರಿ ಪಕ್ಷವೇ ಆಗಿರುವ ಕಾಂಗ್ರೆಸ್ಗೆ ಸೇರಿಕೊಂಡು ಅಲ್ಲಿ ಚುನಾವಣೆಯಲ್ಲಿ ಸೋತು ವಿಧಾನಪರಿಷತ್ ಮೆಟ್ಟಿಲು ಹತ್ತಿತ್ತು ಎಲ್ಲರಿಗೂ ಗೊತ್ತಿದೆ. ಆ ಸಂದರ್ಭ ಅವರು ತಾವು ಕಾಂಗ್ರೆಸ್ ಸಿದ್ಧಾಂತವನ್ನು ಮೆಚ್ಚಿ ಈ ಪಕ್ಷಕ್ಕೆ ಬಂದಿದ್ದೇನೆ ಎಂದು ಹೇಳುತ್ತಾ ಬಿಜೆಪಿಯನ್ನು ವೈರಿ ಎಂಬAತೆ ಟೀಕಿಸಿದ್ದರು. ಆದರೆ ಕೆಲವು ದಿನಗಳ ನಂತರ ಲೋಕಸಭೆ ಚುನಾವಣೆ ಘೋಷಣೆಯಾಗುತ್ತಿದ್ದಂತೆಯೇ ಬಿಜೆಪಿಗೆ ಮರಳಿ ಈಗ ಸಂಸದರಾಗಿದ್ದಾರೆ.
ಇನ್ನು ಬಿಜೆಪಿಯ ಮತ್ತೊಬ್ಬ ಹಿರಿಯ ನಾಯಕ ಎಂದೇ ಕರೆಸಿಕೊಳ್ಳುವ ಶಿವಮೊಗ್ಗದ ಕೆ. ಎಸ್. ಈಶ್ವರಪ್ಪ ಅವರು ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ತಮ್ಮ ಮಗ ಕಾಂತ್ರಾಜ್ ಎಂಬುವವನಿಗೆ ಬಿಫಾರಮ್ ಸಿಕ್ಕಲಿಲ್ಲ ಎಂಬ ಕಾರಣದಿಂದ ಸ್ವತಃ ತಾವೇ ಭಾರತೀಯ ಜನತಾಪಕ್ಷದಿಂದ ಹೊರಬಂದು, ಸ್ವತಂತ್ರವಾಗಿ ಶಿವಮೊಗ್ಗ ವಿಧಾನಸಭಾ ಕ್ಷೇತ್ರದಿಂದ ಚುನಾವಣಾ ಕಣಕ್ಕಿಳಿದಿದ್ದರು. ಯಡಿಯೂರಪ್ಪ ಕುಟುಂಬದ ವಿರುದ್ಧ ಸಮರ ಸಾರಿದ್ದರು. ಆದರೆ ಸೋತು ಸುಣ್ಣವಾಗಿ ಹೋದರು. ಆ ಸಂದರ್ಭ ಬಿ. ಎಸ್. ಯಡಿಯೂರಪ್ಪ ಅವರ ಮಗನನ್ನು ಸೋಲಿಸುವುದೇ ನನ್ನ ಏಕೈಕ ಉದ್ದೇಶ ಎಂದು ಪ್ರಚಾರ ಮಾಡಿದ್ದರು. ಬಿಜೆಪಿಯನ್ನೂ, ಬಿಜೆಪಿ ನಾಯಕರನ್ನೂ ಸೋಲಿಸುವುದೇ ನನ್ನ ಏಕೈಕ ಗುರಿ ಎಂಬ ಘೋಷವಾಕ್ಯವನ್ನೂ ಮೊಳಗಿಸಿದ್ದರು. ನಂತರ ಅವರು ಸೋತಿದ್ದು ಬೇರೆ ವಿಷಯ. ಅಷ್ಟೇ ಅಲ್ಲದೆ, ಸಿದ್ಧರಾಮಯ್ಯ ವಿರುದ್ಧ ತೊಡೆತಟ್ಟಿ ರಾಯಣ್ಣ ಬ್ರಿಗೇಡ್ ಸ್ಥಾಪಿಸಿದ್ದರು, ಇದೀಗ ಅದನ್ನೂ ಬಿಟ್ಟು ರಾಯಣ್ಣ ಚನ್ನಮ್ಮ ಬ್ರಿಗೇಡ್(ಆರ್ಸಿಬಿ) ಕಟ್ಟಲು ಹೊರಟ್ಟಿದ್ದಾರೆ. ಇವೆರಡೂ ದೊಡ್ಡ ನಾಯಕರ ಉದಾಹರಣೆಗಳಷ್ಟೇ. ಹಲವಾರು ಸಣ್ಣಪುಟ್ಟ ಕಾರ್ಯಕರ್ತರುಗಳು ತಮ್ಮ ನಾಯಕರನ್ನೇ ಅನುಸರಿಸಿ ನಡೆಯುತ್ತಲೇ ಇದ್ದಾರೆ. ಅಶಿಸ್ತಿನಿಂದ ವರ್ತಿಸುತ್ತಿದ್ದಾರೆ.
ಇನ್ನು ಪ್ರಸ್ತುತ ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ಸ್ಥಾನಕ್ಕಾಗಿ ನಡೆಯುತ್ತಿರುವ ಹಾದಿರಂಪ ಬೀದಿರಂಪಗಳು ಸಾರ್ವಜನಿಕರಲ್ಲಿ ಹೇಸಿಗೆ ಹುಟ್ಟಿಸುವಂತಿವೆ. ದಿನಬೆಳಗಾಗದರೆ ಅಧ್ಯಕ್ಷ ಸ್ಥಾನದಿಂದ ವಿಜಯೇಂದ್ರ ಅವರನ್ನು ಪದಚ್ಯುತಿಗೊಳಿಸುವುದನ್ನೇ ತಮ್ಮ ಜೀವನದ ಪರಮ ಗುರಿ ಎಂದೇ ಭಾವಿಸಿರುವ ಸುಮಾರು ಅರ್ಧದಷ್ಟು ನಾಯಕರು ಯಾವ ನಾಚಿಕೆಯೂ ಇಲ್ಲದೆ, ತಮ್ಮನ್ನು ಚುನಾಯಿಸಿದ ಮತದಾರರಿಗಾಗಲಿ, ರಾಜ್ಯದ ಜನತೆಗಾಗಲಿ ತಾವು ಹೊಣೆಯೇ ಅಲ್ಲವೇನೋ, ತಮಗೆ ಯಾವುದೇ ಉತ್ತರದಾಯಿತ್ವವೇ ಇಲ್ಲವೇನೋ ಎಂಬAತೆ ಕಿತ್ತಾಟದಲ್ಲಿ ತೊಡಗಿರುವುದು ಜನಸಾಮಾನ್ಯರಲ್ಲಿ ಪಕ್ಷದ ಬಗ್ಗೆ ಅದೆಷ್ಟು ಕೆಟ್ಟ ಭಾವನೆ ಹುಟ್ಟಿಸುತ್ತಿದೆ ಎಂಬ ಯಾವ ಅಳುಕೂ ಇಲ್ಲದೆ ಹೊಡೆದಾಡುತ್ತಿದ್ದಾರೆ.
ಇಷ್ಟಾದರೂ ಯಾವುದೇ ಲಜ್ಜೆಯೂ ಇಲ್ಲದೆ, ದೆಹಲಿಗೆ ಹೋಗುವುದು, ಅಲ್ಲಿ ವರಿಷ್ಠರೊಂದಿಗೆ ತಮ್ಮ ಅಹವಾಲು ಹೇಳುವುದು ಮತ್ತೆ ವಾಪಾಸು ಬೆಂಗಳೂರಿಗೆ ಬರುವುದು. ಅಷ್ಟೇ ಅಲ್ಲ ಹೋಗುವಾಗ ಬರುವಾಗ ವಿಮಾನ ನಿಲ್ದಾಣಗಳಲ್ಲಿ ತಮ್ಮ ಅಭಿಮಾನಿಗಳತ್ತ ಕೈ ಮೇಲೆತ್ತಿ ವಿಕ್ಟರಿ ಚಿಹ್ನೆ(ಎರಡು ಬೆರಳುಗಳಿಂದ) ತೋರಿಸುತ್ತಾ ಓಡಾಡತೊಡಗಿದ್ದಾರೆ.
ಪ್ರಸಕ್ತ ರಾಜ್ಯದಲ್ಲಿ ಸಾವಿರ ಸಾವಿರ ಸಮಸ್ಯೆಗಳಿವೆ. ಜನಸಾಮಾನ್ಯರು ಸಮಸ್ಯೆಗಳ ಸುಳಿಯಲ್ಲಿ ಸಿಲುಕಿ ಸಾಯುತ್ತಿದ್ದಾರೆ. ಮೈಕ್ರೊ ಫೈನ್ಯಾನ್ಸ್ ಸಾಲ ವಸೂಲಿ ಸಮಸ್ಯೆಯಂತೂ ಪೆಡಂಭೂತವಾಗಿ ದಿನದಿನವೂ ಜನರ ಜೀವಗಳನ್ನು ಬಲಿ ತೆಗೆದುಕೊಳ್ಳುತ್ತಲೇ ಇದೆ. ಕೃಷಿಗೋ, ವ್ಯಾಪಾರಕ್ಕೋ ಮಾಡಿದ ಸಾಲ ತೀರಿಸಲಾಗದೆ, ಅಸಲಿಗೆ ಬಡ್ಡಿಯನ್ನೂ ಕಟ್ಟಲಾಗದೆ, ಫೈನಾನ್ಸ್ ಮಂದಿಯ ಕಾಟ ತಾಳಲಾಗದೆ ಅವಮಾನದಿಂದ ನೊಂದು ಬೆಂದು ಹೆಂಗಸರು ಗಂಡಸರು ನೇಣಿಗೆ, ವಿಷಪ್ರಾಶನಕ್ಕೆ ಶರಣಾಗುತ್ತಿದ್ದಾರೆ.
ಇದಾವುದರ ಪರಿಜ್ಞಾನವೂ ಇಲ್ಲದ, ಯಾವ ಬಗ್ಗೆಯೂ ತಲೆ ಕೆಡಿಸಿಕೊಳ್ಳದ ವಿರೋಧ ಪಕ್ಷ ಬಿಜೆಪಿಯ ನಾಯಕರು(ಕೆಲವರನ್ನು ಹೊರತುಪಡಿಸಿ) ಇದಕ್ಕೂ ತಮಗೂ ಸಂಬAಧವೇ ಇಲ್ಲವೇನೋ ಎಂಬAತೆ ಕಿತ್ತಾಟದಲ್ಲಿ ತೊಡಗಿದ್ದಾರೆ.
ವಿರೋಧಪಕ್ಷಕ್ಕೂ ಸರ್ಕಾರದಷ್ಟೇ ಜವಾಬ್ದಾರಿ ಇರುತ್ತದೆ. ಸರ್ಕಾರವನ್ನು ಕಿವಿಹಿಂಡಿ ಸರಿಯಾದ ದಾರಿಯಲ್ಲಿ ನಡೆಯುವಂತೆ ಮಾಡುವುದು ವಿಪಕ್ಷಗಳ ಕೈಯಲ್ಲಿದೆ. ಅವರು ತಮ್ಮ ಹೊಣೆಗಾರಿಕೆಯನ್ನೇ ಮರೆತು ಕೇವಲ ತಮ್ಮ ಸ್ವಾರ್ಥ ಚಿಂತನೆಯಲ್ಲೇ ಮುಳುಗಿ, ಕೇವಲ ತಮಗಾಗಿ, ತಮ್ಮ ಮಕ್ಕಳಿಗಾಗಿ ಬಡಿದಾಡುವುದು ಯಾವ ಸೀಮೆಯ ನ್ಯಾಯ…? ಇದಕ್ಕೇನಾ ಜನ ಅವರನ್ನು ಮತ ಹಾಕಿ ಗೆಲ್ಲಿಸಿದ್ದು…?
ಇನ್ನೂ ನಾಚಿಕೆಗೇಡಿನ ವಿಚಾರವೆಂದರೆ ಆಡಳಿತ ಪಕ್ಷದವರ ಜೊತೆಗೆ, ಅಂದರೆ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿಯವರ ಜೊತೆ ಶಾಮೀಲಾಗಿ ತಮ್ಮನ್ನು ತಾವು ರಕ್ಷಿಸಿಕೊಳ್ಳುತ್ತಿದ್ದಾರೆ ಎಂದು ಉಭಯಬಣಗಳೂ ತಮ್ಮತಮ್ಮಲ್ಲೇ ಪರಸ್ಪರ ಒಬ್ಬರನ್ನೊಬ್ಬರು ತೇಜೋವಧೆ ಮಾಡುತ್ತಾ ತಿರುಗಾಡುತ್ತಿದ್ದಾರೆ. ಇದು ಏನನ್ನು ತೋರಿಸುತ್ತಿದೆ? ಅವರ ಮರ್ಯಾದೆ ಅವರೇ ಕಳೆದುಕೊಳ್ಳುವ ಅವರ ಈ ನಡೆಯನ್ನು ಯಾರಾದರೂ ಸಮರ್ಥಿಸಿಕೊಳ್ಳಲು ಸಾಧ್ಯವೇ. ಇದಕ್ಕಿಂತಲೂ ಆತ್ಮಹತ್ಯಾಕಾರಕವಾದ ವಿಚಾರ ಬೇರೆ ಏನಾದರೂ ಇದೆಯೇ…
ರಾಜ್ಯ ಬಿಜೆಪಿ ನಾಯಕರು ಒಂದು ಮಾತನ್ನು ಗಮನದಲ್ಲಿಟ್ಟುಕೊಳ್ಳಬೇಕು. ನಿಜಕ್ಕೂ ರಾಜ್ಯದಲ್ಲಿ ನಿಮ್ಮ ಮುಖಗಳನ್ನು ನೋಡಿ ಯಾರೂ ಮತ ಹಾಕುತ್ತಿಲ್ಲ ನಿಮಗೆ. ಪಕ್ಷದ ಹಿರಿಯ ನಾಯಕರ ಪ್ರಭಾವದಲ್ಲಿ ನೀವು ಗೆದ್ದುಬರುತ್ತಿದ್ದೀರಿ ಅಷ್ಟೇ. ನಾಳೆ ನೀವೇ ಮತದಾರನ ಬಳಿಗೆ ಹೋದರೆ ನಿಮಗೆ ಒಂದು ಓಟೂ ಬರುವುದಿಲ್ಲ. ಈಗ ಶಾಸಕರಾಗಿದ್ದೀರಿ ಯಾರ ಕೃಪೆಯಿಂದಲೋ. ಈಗ ಒಳ್ಳೆಯ ಕೆಸಗಳನ್ನು ಮಾಡಿ ಜನರ ವಿಶ್ವಾಸ ಗಳಿಸಿ. ಇನ್ನಾದರೂ ಜನರ ಬಳಿಗೆ ಹೋಗುವುದನ್ನು ರೂಢಿ ಮಾಡಿಕೊಳ್ಳಿ. ಅವರ ಕಷ್ಟ-ನಷ್ಟಗಳಿಗೆ ಸ್ಪಂದಿಸಿ. ಇಲ್ಲವಾದರೆ ನಿಮಗೆ ಭವಿಷ್ಯವೇ ಇರಲಾರದು. ಜನ ನಿಮ್ಮನ್ನು ನಂಬಲಾರರು. ಆ ಸಮಯಕ್ಕಾಗಿ ಕಾಯುತ್ತಿರುತ್ತಾರೆ ಜನ. ಇದನ್ನು ನೆನಪಿನಲ್ಲಿಟ್ಟುಕೊಂಡು ಕೆಲಸ ಮಾಡಬೇಕು.