
Former UK PM Rishi Sunak joins job
(ಅಶ್ವವೇಗ) Ashwaveega News 24×7 ಜು.10: ಪ್ರಧಾನಿ ಹುದ್ದೆ ತೊರೆದ ಬಳಿಕ ಬ್ರಿಟಿಷ್ ಮಾಜಿ ಪ್ರಧಾನಿ ರಿಷಿ ಸುನಕ್ ಮತ್ತೆ ಖಾಸಗಿ ಕಂಪನಿ ಕೆಲಸಕ್ಕೆ ಜಾಯಿನ್ ಆಗಿದ್ದಾರೆ. ಅಮೆರಿಕದ ಪ್ರಸಿದ್ಧ ಹೂಡಿಕೆ ಬ್ಯಾಂಕ್ ಗೋಲ್ಡ್ಮನ್ ಸ್ಯಾಚ್ಸ್ ಗ್ರೂಪ್ಗೆ (Goldman Sachs Group) ಸೇರ್ಪಡೆಗೊಂಡಿದ್ದಾರೆ. ಅವರನ್ನು ಕಂಪನಿಯು ಹಿರಿಯ ಸಲಹೆಗಾರರನ್ನಾಗಿ ನೇಮಿಸಿಕೊಂಡಿದೆ.
ಈ ಬಗ್ಗೆ ಖುದ್ದು ಕಂಪನಿಯೇ ಮಾಹಿತಿಯನ್ನು ಹಂಚಿಕೊಂಡಿದೆ. ಸುನಕ್ ಅವರು ಇನ್ಮುಂದೆ ನಮ್ಮ ಕಂಪನಿಗೆ ಹಿರಿಯರಾಗಿ ಕೆಲಸ ಮಾಡಲಿದ್ದಾರೆ ಎಂದಿದೆ. ಸುನಕ್ ಆರ್ಥಿಕ ಮತ್ತು ಭೌಗೋಳಿಕ ರಾಜಕೀಯ ವಿಷಯಗಳ ಕುರಿತು ಅನುಭವ ಮತ್ತು ತಮ್ಮ ದೃಷ್ಟಿಕೋನವನ್ನು ಹಂಚಿಕೊಳ್ಳಲಿದ್ದಾರೆ. ಸುನಕ್ ಅಕ್ಟೋಬರ್ 2022 ರಿಂದ ಜುಲೈ 2024 ರವರೆಗೆ ಬ್ರಿಟನ್ನ ಪ್ರಧಾನ ಮಂತ್ರಿಯಾಗಿದ್ದರು.
ರಿಷಿ ಸುನಕ್ 2015ರಲ್ಲಿ ಸಂಸತ್ ಸದಸ್ಯರಾಗಿ ರಾಜಕೀಯ ಪ್ರವೇಶಿಸಿದರು. ಪ್ರಧಾನಿಯಾಗುವ ಮೊದಲು ಫೆಬ್ರವರಿ 2020 ರಿಂದ ಜುಲೈ 2022 ರವರೆಗೆ ಬ್ರಿಟನ್ನ ಹಣಕಾಸು ಸಚಿವರಾಗಿದ್ದರು. ಅದಕ್ಕೂ ಮೊದಲು ವಸತಿ, ಸ್ಥಳೀಯ ಸರ್ಕಾರ ಮತ್ತು ಹಣಕಾಸು ಸಚಿವಾಲಯದಲ್ಲಿ ಕೆಲಸ ಮಾಡಿದ್ದರು. ವಿಶೇಷ ಅಂದ್ರೆ ರಾಜಕೀಯಕ್ಕೆ ಸೇರುವ ಮೊದಲು ನ್ಯೂಯಾರ್ಕ್ ಮೂಲದ ಗೋಲ್ಡ್ಮನ್ ಸ್ಯಾಚ್ಸ್ನಲ್ಲೇ ಕೆಲಸ ಮಾಡುತ್ತಿದ್ದರು.
ಕಳೆದ ವರ್ಷದ ಸಾರ್ವತ್ರಿಕ ಚುನಾವಣೆಯಲ್ಲಿ ಸುನಕ್ ಅವರ ಕನ್ಸರ್ವೇಟಿವ್ ಪಕ್ಷ ಹೀನಾಯ ಸೋಲು ಅನುಭವಿಸಿತು. ಆದರೆ ಅವರು ಇನ್ನೂ ಉತ್ತರ ಇಂಗ್ಲೆಂಡ್ನ ರಿಚ್ಮಂಡ್ ಮತ್ತು ನಾರ್ಥಲರ್ಟನ್ ಕ್ಷೇತ್ರದ ಸಂಸದರಾಗಿದ್ದಾರೆ.