
Thailand PM Paetongtarn Shinawatra Suspended Over A Leaked Phone Call
ಕಾಂಬೋಡಿಯಾದ ಮಾಜಿ ನಾಯಕ ಹುನ್ ಸೇನ್ ಅವರೊಂದಿಗಿನ ದೂರವಾಣಿ ಸಂಭಾಷಣೆ ಸೋರಿಕೆಯಾದ ಹಿನ್ನೆಲೆಯಲ್ಲಿ ಪ್ರಧಾನಿ ಪೇಟೊಂಗ್ಟಾರ್ನ್ ಶಿನವಾತ್ರ ಅವರನ್ನು ಥಾಯ್ಲೆಂಡ್ನ ಸಾಂವಿಧಾನಿಕ ನ್ಯಾಯಾಲಯ ಅಮಾನತು ಮಾಡಿದೆ. ಕರೆ ಸೋರಿಕೆಯಾದ ಹಿನ್ನಲೆಯಲ್ಲಿ ಪ್ರಧಾನಿ ಪಟ್ಟಕ್ಕೆ ರಾಜೀನಾಮೆ ನೀಡುವಂತೆ ಹೆಚ್ಚಿನ ಒತ್ತಡಕ್ಕೆ ಒಳಗಾಗಿದ್ದರು. ಆದರೆ, ಅದಕ್ಕೆ ಶಿನವಾತ್ರ ನಿರಾಕರಿಸಿದ್ದ ಹಿನ್ನಲೆಯಲ್ಲಿ ಕೋರ್ಟ್ಗೆ ಅರ್ಜಿ ಸಲ್ಲಿಕೆಯಾಗಿತ್ತು.
ಪೇಟೊಂಗ್ಟಾರ್ನ್, ಕಾಂಬೋಡಿಯಾದ ಮಾಜಿ ನಾಯಕನನ್ನು “ಅಂಕಲ್” ಎಂದು ಕರೆದಿದ್ದಲ್ಲದೆ ಥಾಯ್ ಮಿಲಿಟರಿ ಕಮಾಂಡರ್ನನ್ನು ಟೀಕಿಸಿದ್ದು ಸಾರ್ವಜನಿಕರ ಕೋಪಕ್ಕೆ ಕಾರಣವಾಯಿತು. ಅವರನ್ನು ಪ್ರಧಾನಿ ಹುದ್ದೆಯಿಂದ ವಜಾ ಮಾಡುವಂತೆ ಅರ್ಜಿ ಸಲ್ಲಿಸಲಾಗಿದ್ದು, ಇದನ್ನು ಕೋರ್ಟ್ ಕೂಡ ಪರಿಗಣಿಸುತ್ತಿದೆ. ಕಳೆದ ಎರಡು ದಶಕಗಳಿಂದ ಥಾಯ್ ರಾಜಕೀಯದಲ್ಲಿ ಪ್ರಾಬಲ್ಯ ಹೊಂದಿರುವ ಪ್ರಬಲ ಶಿನವಾತ್ರ ಕುಲದಲ್ಲಿ ತಮ್ಮ ಅವಧಿಯನ್ನು ಪೂರ್ಣಗೊಳಿಸುವ ಮೊದಲು ಅಧಿಕಾರ ಕಳೆದುಕೊಳ್ಳುವ ಮೂರನೇ ರಾಜಕಾರಣಿ ಪೇಟೊಂಗ್ಟಾರ್ನ್ ಆಗುವ ಸಾಧ್ಯತೆ ಇದೆ.
ಎರಡು ವಾರಗಳ ಹಿಂದೆ ಪ್ರಮುಖ ಸಂಪ್ರದಾಯವಾದಿ ಮಿತ್ರಪಕ್ಷವೊಂದು ಸರ್ಕಾರಕ್ಕೆ ನೀಡಿದ ಬೆಂಬಲವನ್ನು ಹಿಂತೆಗೆದುಕೊಂಡ ಬಳಿಕ, ಅವರ ಆಡಳಿತ ಒಕ್ಕೂಟವು ಈಗಾಗಲೇ ಅಲ್ಪಮತಕ್ಕೆ ಕುಸಿದಿದೆ.
ಸಾಂವಿಧಾನಿಕ ನ್ಯಾಯಾಲಯವು ಅವರ ವಜಾಗೊಳಿಸುವ ಪ್ರಕರಣವನ್ನು ಪರಿಗಣಿಸುವಾಗ ಅವರನ್ನು ಅಮಾನತುಗೊಳಿಸಲು 7-2 ಮತ ಚಲಾಯಿಸಿತು ಮತ್ತು ಅವರು ತಮ್ಮ ಪ್ರತಿವಾದವನ್ನು ಮಂಡಿಸಲು 15 ದಿನಗಳ ಕಾಲಾವಕಾಶವಿದೆ.
ಈ ಮಧ್ಯೆ ಉಪ ಪ್ರಧಾನಿ ದೇಶದ ಹಂಗಾಮಿ ನಾಯಕಿಯಾಗಿ ಸೇವೆ ಸಲ್ಲಿಸಲಿದ್ದಾರೆ. ಆದರೆ, ಪೇಟೊಂಗ್ಟಾರ್ನ್ ಅವರು ಸಂಸ್ಕೃತಿ ಸಚಿವರಾಗಿ ಸಂಪುಟದಲ್ಲಿ ಉಳಿಯಲಿದ್ದಾರೆ, ಅವರನ್ನು ಅಮಾನತುಗೊಳಿಸುವ ಗಂಟೆಗಳ ಮೊದಲು ನಡೆದ ಸಂಪುಟ ಪುನರ್ರಚನೆಯ ವೇಳೆ ಈ ಸಂಪುಟ ಬದಲಾವಣೆಯನ್ನು ಅನುಮೋದಿಸಲಾಗಿತ್ತು.
ಮಂಗಳವಾರ, ಪೇಟೊಂಗ್ಟಾರ್ನ್ ದೇಶಕ್ಕೆ ಮತ್ತೊಮ್ಮೆ ಕ್ಷಮೆಯಾಚಿಸಿದರು, ಹುನ್ ಸೇನ್ ಅವರೊಂದಿಗಿನ ಅವರ ಫೋನ್ ಕರೆಯ ಉದ್ದೇಶ “100% ಕ್ಕಿಂತ ಹೆಚ್ಚು… ದೇಶಕ್ಕಾಗಿ” ಎಂದು ಹೇಳಿದರು. ಆ ಕರೆ ಎರಡೂ ದೇಶಗಳ ನಡುವಿನ ಗಡಿ ವಿವಾದದ ಕುರಿತಾಗಿತ್ತು. ಇದು ದಶಕಗಳಷ್ಟು ಹಳೆಯದಾಗಿದ್ದರೂ, ಮೇ ಅಂತ್ಯದಲ್ಲಿ ಕಾಂಬೋಡಿಯನ್ ಸೈನಿಕನೊಬ್ಬ ಸಾವನ್ನಪ್ಪಿದ ನಂತರ ಉದ್ವಿಗ್ನತೆ ಮತ್ತೆ ಹೆಚ್ಚಾಗಿದೆ.
ಸೋರಿಕೆಯಾದ ಆಡಿಯೋ ವಿಶೇಷವಾಗಿ ಕನ್ಸರ್ವೇಟಿವ್ ಸದಸ್ಯರನ್ನು ಕೆರಳಿಸಿದೆ. ಅವರು ಅವರು ಹುನ್ ಸೇನ್ ಅವರನ್ನು ನಮ್ಮ ಪ್ರಧಾನಿ ಸಮಾಧಾನಪಡಿಸುತ್ತಿದ್ದಾರೆ ಮತ್ತು ಥೈಲ್ಯಾಂಡ್ನ ಮಿಲಿಟರಿಯನ್ನು ದುರ್ಬಲಗೊಳಿಸುತ್ತಿದ್ದಾರೆ ಎಂದು ಆರೋಪಿಸಿದರು.ಆದರೆ ಮಂಗಳವಾರ ಪೇಟೊಂಗ್ಟಾರ್ನ್ ತಮ್ಮ ನಿರ್ಧಾರ ಸಮರ್ಥಿಸಿಕೊಂಡಿದ್ದಾರೆ. “ನನ್ನ ಸ್ವಂತ ಹಿತಾಸಕ್ತಿಗಾಗಿ ಅದನ್ನು ಮಾಡುವ ಉದ್ದೇಶ ನನಗಿರಲಿಲ್ಲ. ಅವ್ಯವಸ್ಥೆಯನ್ನು ತಪ್ಪಿಸುವುದು, ಜಗಳವಾಡುವುದನ್ನು ತಪ್ಪಿಸುವುದು ಮತ್ತು ಜೀವಹಾನಿಯನ್ನು ತಪ್ಪಿಸುವುದು ಹೇಗೆ ಎಂಬುದರ ಬಗ್ಗೆ ಮಾತ್ರ ನಾನು ಯೋಚಿಸಿದೆ.” ಎಂದಿದ್ದಾರೆ.