Ashwaveega News 24×7 ಜೂನ್ 03 – 2026 ಬೆಂಗಳೂರು : ರಾಜ್ಯ ರಾಜಕಾರಣದಲ್ಲಿ ಸಚಿವ ಸಂಪುಟ ಪುನರ್ರಚನೆ ಚರ್ಚೆ ತಾರಕಕ್ಕೇರಿರುವ ಬೆನ್ನಲ್ಲೇ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ಸಂಭಾವ್ಯ ಸಚಿವರ ಪಟ್ಟಿ ಇದೀಗ ಭಾರೀ ಕುತೂಹಲಕ್ಕೆ ಕಾರಣವಾಗಿದೆ.
ಅಶ್ವವೇಗಕ್ಕೆ ಲಭ್ಯವಾಗಿರುವ ಎಕ್ಸ್ಕ್ಲೂಸಿವ್ ಮಾಹಿತಿಯ ಪ್ರಕಾರ, ಡಿ.ಕೆ. ಶಿವಕುಮಾರ್ ಸಂಪುಟದಲ್ಲಿ ಒಟ್ಟು 14 ಮಂದಿ ಸ್ಥಾನ ಪಡೆಯುವ ಸಾಧ್ಯತೆ ಇದೆ . ವಿಶೇಷ ಅಂದರೆ, ಈ ಪಟ್ಟಿಯಲ್ಲಿ ಕೇವಲ ಡಿಕೆ ಬಣದ ನಾಯಕರು ಮಾತ್ರವಲ್ಲದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬಣದ ಶಾಸಕರಿಗೂ ಸ್ಥಾನ ಕಲ್ಪಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಮುಂಬರುವ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು ಜಾತಿ, ಪ್ರದೇಶ ಮತ್ತು ರಾಜಕೀಯ ಸಮತೋಲನದ ಲೆಕ್ಕಾಚಾರದಲ್ಲಿ ಈ ಸಂಭಾವ್ಯ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ . ಹೈಕಮಾಂಡ್ ಕೂಡ ಬಹುತೇಕ ಹಿರಿಯ ನಾಯಕರಿಗೆ ಮಣೆ ಹಾಕಿದ್ದು, ಅನುಭವ ಮತ್ತು ಸಂಘಟನಾ ಸಾಮರ್ಥ್ಯಕ್ಕೆ ಆದ್ಯತೆ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ಸಂಭಾವ್ಯ ಲೆಕ್ಕಾಚಾರದ ಪ್ರಕಾರ, ಸಂಪುಟದಲ್ಲಿ ಮೂವರು ಲಿಂಗಾಯತ ಸಮುದಾಯದ ನಾಯಕರಿಗೆ ಅವಕಾಶ ದೊರೆಯುವ ಸಾಧ್ಯತೆ ಇದೆ. ಜೊತೆಗೆ ಇಬ್ಬರು ಒಕ್ಕಲಿಗ ನಾಯಕರಿಗೂ ಸ್ಥಾನ ಸಿಗಬಹುದು. ದಲಿತ ಸಮುದಾಯಕ್ಕೆ ವಿಶೇಷ ಪ್ರಾತಿನಿಧ್ಯ ನೀಡಲಾಗಿದ್ದು, ದಲಿತ ಬಲಗೈ ಸಮುದಾಯದ ಇಬ್ಬರು ಹಾಗೂ ದಲಿತ ಎಡಗೈ ಸಮುದಾಯದ ಒಬ್ಬ ನಾಯಕನಿಗೆ ಅವಕಾಶ ಕಲ್ಪಿಸಲಾಗಿದೆ
ಇದರೊಂದಿಗೆ ಇಬ್ಬರು ಕುರುಬ ಸಮುದಾಯದ ನಾಯಕರಿಗೆ ಸಚಿವ ಸ್ಥಾನ ದೊರೆಯುವ ಸಾಧ್ಯತೆ ಇದೆ. ಅಲ್ಪಸಂಖ್ಯಾತರ ಪ್ರತಿನಿಧಿಯಾಗಿ ಒಬ್ಬ ಮುಸ್ಲಿಂ ನಾಯಕ ಹಾಗೂ ಕ್ರೈಸ್ತ ಸಮುದಾಯದ ಒಬ್ಬ ಶಾಸಕರ ಹೆಸರೂ ಪಟ್ಟಿಯಲ್ಲಿ ಕೇಳಿಬರುತ್ತಿದೆ. ಅಲ್ಲದೇ ವಾಲ್ಮೀಕಿ ಸಮುದಾಯದ ಒಬ್ಬ ನಾಯಕ ಮತ್ತು ರೆಡ್ಡಿ ಸಮುದಾಯದ ಒಬ್ಬ ಶಾಸಕರಿಗೂ ಅವಕಾಶ ಸಿಗುವ ಸಾಧ್ಯತೆ ಇದೆ.
