Ashwaveega News 24×7 ಮೇ 05 – 2026 : ತಮಿಳುನಾಡು ರಾಜಕೀಯದಲ್ಲಿ ಭಾರೀ ಸಂಚಲನ ಸೃಷ್ಟಿಸಿರುವ ಬೆಳವಣಿಗೆಗಳು ಇದೀಗ ಹೊಸ ತಿರುವು ಪಡೆದುಕೊಂಡಿವೆ . “ದಳಪತಿ ಕೈ ಸರ್ಕಾರ” ಎಂಬ ಮಾತುಗಳು ಜೋರಾಗುತ್ತಿದ್ದು, TVK ನೇತೃತ್ವದಲ್ಲಿ ಸರ್ಕಾರ ರಚನೆ ಬಹುತೇಕ ಫಿಕ್ಸ್ ಎನ್ನಲಾಗುತ್ತಿದೆ.
ಚುನಾವಣೆಯ ಬಳಿಕ ಅಚ್ಚರಿಯ ರಾಜಕೀಯ ಸಮೀಕರಣಗಳು ಕಾಣಿಸಿಕೊಂಡಿವೆ. ಪರಸ್ಪರ ವಿರೋಧಿ ಬಣಗಳಲ್ಲಿ ಇದ್ದ ಕಾಂಗ್ರೆಸ್ ಮತ್ತು ಪಿಎಂಕೆ ಈಗ ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳುವ ಲಕ್ಷಣಗಳು ಗೋಚರಿಸುತ್ತಿವೆ. ಇದುವರೆಗೆ ಡಿಎಂಕೆ ಮೈತ್ರಿಕೂಟದಲ್ಲಿ ಕಾಂಗ್ರೆಸ್ ಇದ್ದರೆ, ಅಣ್ಣಾಡಿಎಂಕೆ ಪಾಳಯದಲ್ಲಿ ಪಿಎಂಕೆ ಸ್ಥಾನ ಪಡೆದಿತ್ತು. ಆದರೆ ಇದೀಗ ಅಧಿಕಾರಕ್ಕಾಗಿ ಎರಡೂ ಪಕ್ಷಗಳು TVK ಜೊತೆ ಕೈಜೋಡಿಸಲು ಸಜ್ಜಾಗಿವೆ ಎನ್ನಲಾಗುತ್ತಿದೆ.
ಇನ್ನೂ ಒಂದು ಪ್ರಮುಖ ಬೆಳವಣಿಗೆ ಎಂದರೆ — ಸಚಿವ ಸ್ಥಾನಗಳಿಗಾಗಿ ಲಾಬಿ. ಕಾಂಗ್ರೆಸ್ ಮತ್ತು ಪಿಎಂಕೆ ತಲಾ ಎರಡು ಮಂತ್ರಿ ಸ್ಥಾನಗಳನ್ನು ಕೇಳಿವೆ ಎಂಬ ಮಾಹಿತಿ ರಾಜಕೀಯ ವಲಯದಲ್ಲಿ ಹರಿದಾಡುತ್ತಿದೆ. ಮತ್ತೊಂದೆಡೆ, ಎಡಪಕ್ಷಗಳೂ ವಿಜಯ್ ಸರ್ಕಾರಕ್ಕೆ ಬೆಂಬಲ ನೀಡಲು ಒಲವು ತೋರಿಸುತ್ತಿವೆ.
ಇದರ ನಡುವೆ, ದಳಪತಿ ವಿಜಯ್ ಐತಿಹಾಸಿಕ ಹೆಜ್ಜೆಗೆ ಸಜ್ಜಾಗಿದ್ದಾರೆ. ಸರ್ಕಾರ ರಚನೆಗೆ ಗವರ್ನರ್ ಅವರನ್ನು ಭೇಟಿ ಮಾಡಲು ಸಮಯ ಕೇಳಿರುವ ವಿಜಯ್, ಎರಡು ವಾರಗಳೊಳಗೆ ಬಹುಮತ ಸಾಬೀತುಪಡಿಸುವುದಾಗಿ ಪತ್ರ ಸಲ್ಲಿಸಿರುವ ಮಾಹಿತಿ ಲಭ್ಯವಾಗಿದೆ. ಇದೀಗ ರಾಜಭವನದ ಕರೆಯ ನಿರೀಕ್ಷೆಯಲ್ಲಿ TVK ನಾಯಕತ್ವ ಕಾದಿದೆ.
ಇದೀಗ ಪಕ್ಷದ ಕಚೇರಿಯಲ್ಲಿ ನೂತನ ಶಾಸಕರ ಸಭೆ ನಡೆಯುತ್ತಿದ್ದು, ವಿಜಯ್ ನೇತೃತ್ವದ ತಂಡದಲ್ಲಿ ಭಾರೀ ಉತ್ಸಾಹ ಕಾಣುತ್ತಿದೆ. ವಿಜಯ್ ನಿವಾಸ ಹಾಗೂ ಪಕ್ಷದ ಕಚೇರಿ ಎರಡೂ ಕಡೆ ಜನಸಾಗರ ಹರಿದು ಬರುತ್ತಿದ್ದು, ಅಭಿನಂದನೆಗಳ ಮಹಾಪೂರವೇ ಹರಿದಾಡುತ್ತಿದೆ.
ಆದರೆ, ಈ ರಾಜಕೀಯ ಬೆಳವಣಿಗೆಗಳ ನಡುವೆ ಇನ್ನೂ ಅಂತಿಮ ಘೋಷಣೆ ಹೊರಬಿದ್ದಿಲ್ಲ. ಮೈತ್ರಿ, ಮಂತ್ರಿಗಿರಿ, ಹಾಗೂ ಸರ್ಕಾರ ರಚನೆ — ಇವೆಲ್ಲವೂ ಮುಂದಿನ ಕೆಲವು ದಿನಗಳಲ್ಲಿ ಸ್ಪಷ್ಟವಾಗಲಿವೆ .
