Ashwaveega News 24×7 ಜನವರಿ 23 : ರಾಜ್ಯ ಸರ್ಕಾರ ಮತ್ತು ರಾಜ್ಯಪಾಲರ ನಡುವೆ ಗಂಭೀರ ಸಂಘರ್ಷ ಭುಗಿಲೆದ್ದಿದೆ. ಸರ್ಕಾರದ ಭಾಷಣ ಓದದ ರಾಜ್ಯಪಾಲರ ನಡೆ ಇದೀಗ ರಾಜಕೀಯ ದಂಗಲ್ಗೆ ಕಾರಣವಾಗಿದೆ. ವಿಧಾನಸಭೆಯಲ್ಲಿ ಸರ್ಕಾರದ ಅಧಿಕೃತ ಭಾಷಣವನ್ನು ಸಂಪೂರ್ಣವಾಗಿ ಓದದೇ ರಾಜ್ಯಪಾಲರು ಭಾಷಣ ಮುಗಿಸಿರುವುದು ವಿವಾದಕ್ಕೆ ಕಾರಣವಾಗಿದ್ದು, ಭಾಷಣದ ಬಳಿಕ ಕಡ್ಡಾಯವಾಗಿ ನಡೆಯಬೇಕಿದ್ದ ರಾಷ್ಟ್ರಗೀತೆಗೂ ಮುನ್ನವೇ ರಾಜ್ಯಪಾಲರು ಸಭಾಂಗಣದಿಂದ ಹೊರನಡೆದಿದ್ದಾರೆ ಎಂಬ ಆರೋಪ ಕೇಳಿಬಂದಿದೆ…
ಈ ನಡೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ರಾಜ್ಯ ಸರ್ಕಾರ, ರಾಜ್ಯಪಾಲರ ವಿರುದ್ಧ ಕಾನೂನು ಸಮರ ನಡೆಸುವ ಕುರಿತು ಗಂಭೀರ ಚರ್ಚೆಗೆ ಮುಂದಾಗಿದೆ. ಮುಖ್ಯಮಂತ್ರಿ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ವಿಷಯವನ್ನು ವಿಶೇಷ ಅಜೆಂಡಾ ಆಗಿ ಚರ್ಚಿಸಲಾಗಿದ್ದು, ಸರ್ಕಾರದೊಂದಿಗೆ ರಾಜ್ಯಪಾಲರೇ ಸಂಘರ್ಷಕ್ಕೆ ಇಳಿದಂತಾಗಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ರಾಜ್ಯಪಾಲರ ನಡೆ ಸಂವಿಧಾನಾತ್ಮಕ ಮಿತಿಯನ್ನು ಮೀರಿದೆ ಎಂದು ಕೆಲ ಸಚಿವರು ಆಕ್ರೋಶ ವ್ಯಕ್ತಪಡಿಸಿದ್ದು , ರಾಜ್ಯಪಾಲರನ್ನು ವಾಪಸ್ ಕರೆಸಿಕೊಳ್ಳುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡುವ ಕುರಿತು ಕೂಡ ಚರ್ಚೆ ನಡೆದಿದೆ. ಇದಲ್ಲದೇ, ರಾಜ್ಯಪಾಲರ ವಿರುದ್ಧ ರಾಷ್ಟ್ರಪತಿಗಳಿಗೆ ಅಧಿಕೃತ ದೂರು ಸಲ್ಲಿಸುವುದು, ಪತ್ರ ಬರೆದು ಸಂವಿಧಾನ ಉಲ್ಲಂಘನೆಯ ಬಗ್ಗೆ ಗಮನ ಸೆಳೆಯುವ ಬಗ್ಗೆ ಸಚಿವ ಸಂಪುಟದಲ್ಲಿ ಗಂಭೀರವಾಗಿ ಚರ್ಚಿಸಲಾಗಿದೆ.
ಈ ವಿಚಾರದಲ್ಲಿ ತಜ್ಞರ ಕಾನೂನು ಸಲಹೆ ಪಡೆದು ಮುಂದಿನ ಹೋರಾಟದ ರೂಪುರೇಷೆ ತಯಾರಿಸಲು ಸರ್ಕಾರ ನಿರ್ಧರಿಸಿದ್ದು, ರಾಜ್ಯಪಾಲರ ವಿರುದ್ಧದ ಹೋರಾಟ ಮತ್ತಷ್ಟು ತೀವ್ರವಾಗುವ ಸೂಚನೆ ನೀಡಿದೆ. ಒಟ್ಟಾರೆ, ಭಾಷಣದಿಂದ ಆರಂಭವಾದ ವಿವಾದ ಈಗ ರಾಜ್ಯ ಸರ್ಕಾರ V/s ರಾಜ್ಯಪಾಲರ ನಡುವಿನ ನೇರ ಸಂಘರ್ಷವಾಗಿ ಬದಲಾಗಿದ್ದು, ಮುಂದಿನ ದಿನಗಳಲ್ಲಿ ಈ ರಾಜಕೀಯ ಸಮರ ಯಾವ ದಿಕ್ಕು ತಾಳುತ್ತದೆ ಅನ್ನೋದು ಕಾದು ನೋಡಬೇಕಾಗಿದೆ.
