Ashwaveega News 24×7 ಜನವರಿ 24 – ಬಳ್ಳಾರಿ: ಬ್ಯಾನರ್ ಗಲಾಟೆಯ ಕಾವು ಆರುವ ಮುನ್ನವೇ ಶುಕ್ರವಾರ ಸಂಜೆ ನಗರ ಹೊರವಲಯದ ಶಾಸಕ ಗಾಲಿ ಜನಾರ್ದನ ರೆಡ್ಡಿಯವರ ಮಾದರಿ ನಿವಾಸದಲ್ಲಿ (ಮಾಡಲ್ ಹೌಸ್) ಬೆಂಕಿ ಅವಘಡ ಸಂಭವಿಸಿದೆ. ಬಳ್ಳಾರಿ ನಗರ ಹೊರವಲಯದ ಇಎಸ್ಐ ಆಸ್ಪತ್ರೆ ಮಾರ್ಗದಲ್ಲಿರುವ ಜಿ ಸ್ಕೈರ್ ಬಡಾವಣೆಯಲ್ಲಿನ ಮಾದರಿ ಮನೆಗೆ ಮಂಗಳವಾರ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡು ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿದೆ. 109 ಎಕರೆ ವ್ಯಾಪ್ತಿಯಲ್ಲಿ ವಿಸ್ತಾರಗೊಂಡಿರುವ ಜಿ ಸ್ಕೈರ್ ಬಡಾವಣೆ ರೆಡ್ಡಿ ಮತ್ತು ಮಾಜಿ ಸಚಿವ ಬಿ. ಶ್ರೀರಾಮುಲು ಅವರ ಜಂಟಿ ಒಡೆತನದಲ್ಲಿದ್ದು, ಬಡಾವಣೆಯಲ್ಲಿನ 60×50 ವಿಸ್ತೀರ್ಣದ ವಿಲ್ಲಾ ಮಾದರಿ ಮನೆಗೆ ಬೆಂಕಿ ತಗುಲಿದೆ.
2011ರಲ್ಲಿ ಸುಮಾರು 4 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದ್ದ ಈ ಮಾದರಿ ಮನೆ ಬಡಾವಣೆಯ ಆಕರ್ಷಣೆಯ ಕೇಂದ್ರವಾಗಿತ್ತು . ಬೆಂಕಿ ಅವಘಡದ ವೇಳೆ ಯಾರಿಗೂ ಗಾಯಗಳಾಗಿಲ್ಲ. ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ನಿಯಂತ್ರಣಕ್ಕೆ ತಂದರು. ಬೆಂಕಿ ಸಂಭವಿಸಿದ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಸಂಬಂಧಿಸಿದ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
