Ashwaveega News 24×7 ಜನವರಿ 25 – ಬೆಂಗಳೂರು : ಬಾರ್ ಲೈಸೆನ್ಸ್ ನೀಡುವ ನೆಪದಲ್ಲಿ ಲಂಚ ಬೇಡಿಕೆ ಆರೋಪ ಪ್ರಕರಣದಲ್ಲಿ ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರಗೆ ದೊಡ್ಡ ಸಂಕಟ ಎದುರಾಗಿದೆ. ಲೋಕಾಯುಕ್ತ ಪೊಲೀಸರು ದಾಖಲಿಸಿರುವ ಎಫ್ಐಆರ್ನಲ್ಲಿ ಸಚಿವ ತಿಮ್ಮಾಪುರ ಅವರ ಹೆಸರನ್ನು ಉಲ್ಲೇಖಿಸಿರುವುದು ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.
ಲೋಕಾಯುಕ್ತ ಎಫ್ಐಆರ್ನಲ್ಲಿ “ಮಿನಿಸ್ಟರ್” ಎಂಬ ಪದ ಬಳಕೆಯಾಗಿದ್ದು, ಲಂಚ ಬೇಡಿಕೆ ಪ್ರಕ್ರಿಯೆಯಲ್ಲಿ ಸಚಿವರ ಪಾತ್ರವಿದೆ ಎಂಬ ಆರೋಪಗಳಿಗೆ ಇಂಧನ ನೀಡಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಅಬಕಾರಿ ಉಪ ಆಯುಕ್ತ (ಡಿಸಿ) ಜಗದೀಶ್ ನಾಯಕ್ ಅವರದ್ದೆಂದು ಹೇಳಲಾಗುತ್ತಿರುವ ಆಡಿಯೋ ಸಾಕ್ಷ್ಯವೂ ಇದೀಗ ಬಹಿರಂಗವಾಗಿದ್ದು, ಪ್ರಕರಣ ಮತ್ತಷ್ಟು ಗಂಭೀರ ಸ್ವರೂಪ ಪಡೆದುಕೊಂಡಿದೆ..
ಆಡಿಯೋ ಸಂಭಾಷಣೆಯಲ್ಲಿ ಲಂಚದ ಹಣವನ್ನು ಯಾರ್ಯಾರಿಗೆ ಕೊಡಬೇಕೆಂಬ ವಿವರಗಳಿವೆ ಅಂತೆ . ಸಚಿವ, ಅಬಕಾರಿ ಇನ್ಸ್ಪೆಕ್ಟರ್, ಡಿಸಿ ಕಚೇರಿ, ಅಬಕಾರಿ ಡಿಸಿ ಕಚೇರಿ ಸೇರಿದಂತೆ, ನಂತರ ಕಮಿಷನರ್ ಕಚೇರಿಯಲ್ಲಿನ ನಾಲ್ಕು ಟೇಬಲ್, ಜೆ.ಸಿ, ಹೆಚ್ಚುವರಿ ಆಯುಕ್ತರು ಹಾಗೂ ಇಬ್ಬರು ಡಿಸಿಗಳಿಗೆ ಹಣ ನೀಡಬೇಕೆಂಬ ಮಾತುಗಳು ಕೇಳಿಬರುತ್ತವೆ ಎಂಬುದು ದೂರಿನ ಅಂಶ.
ಈ ಎಲ್ಲ ವಿಷಯಗಳನ್ನು ಆಧರಿಸಿ ದೂರುದಾರನಿಂದ ಲೋಕಾಯುಕ್ತಕ್ಕೆ ಸಲ್ಲಿಕೆಯಾಗಿರುವ ದೂರು ಇದೀಗ ಎಫ್ಐಆರ್ ಹಂತ ತಲುಪಿದ್ದು, “ಮಿನಿಸ್ಟರ್ ಆರ್.ಬಿ. ತಿಮ್ಮಾಪುರಗೆ ಉರುಳಾಗುತ್ತಾ ಈ ಎಫ್ಐಆರ್ ?” ಎಂಬ ಪ್ರಶ್ನೆ ಎದ್ದಿದೆ.
ಪ್ರಕರಣದ ತನಿಖೆಯನ್ನು ಲೋಕಾಯುಕ್ತ ಪೊಲೀಸರು ಮುಂದುವರಿಸಿದ್ದು, ಆಡಿಯೋ ಸಾಕ್ಷ್ಯದ ದೃಢತೆ, ಹಣದ ಲಿಂಕ್ಗಳು ಮತ್ತು ಅಧಿಕಾರಿಗಳ ಪಾತ್ರದ ಬಗ್ಗೆ ಪರಿಶೀಲನೆ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ತನಿಖೆ ಯಾವ ತಿರುವು ಪಡೆಯಲಿದೆ ಎಂಬುದನ್ನು ಕಾದು ನೋಡಬೇಕಿದೆ.
