Ashwaveega News 24×7 ಫೆಬ್ರವರಿ 2026 – ನವದೆಹಲಿ : ದೇಶದ ಆರ್ಥಿಕ ಭವಿಷ್ಯ ನಿರ್ಧರಿಸುವ 2026ರ ಕೇಂದ್ರ ಬಜೆಟ್ ಇತಿಹಾಸದಲ್ಲೇ ಎರಡನೇ ಬಾರಿ ಭಾನುವಾರ ಕೇಂದ್ರ ಬಜೆಟ್ ಮಂಡನೆ ನಡೆಯಲಿದ್ದು, ಈ ಬಜೆಟ್ ಹಲವು ಕಾರಣಗಳಿಂದ ಗಮನ ಸೆಳೆದಿದೆ.
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಈ ಬಾರಿ ದಾಖಲೆ 9ನೇ ಬಜೆಟ್ ಮಂಡಿಸಲು ಸಜ್ಜಾಗಿದ್ದಾರೆ. ನಿರಂತರವಾಗಿ ಅತಿ ಹೆಚ್ಚು ಬಜೆಟ್ ಮಂಡಿಸಿದ ಮಹಿಳಾ ಹಣಕಾಸು ಸಚಿವೆ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಲಿದ್ದಾರೆ.
2026ರ ಬಜೆಟ್ನಲ್ಲಿ ದೇಶವಾಸಿಗಳ ನಿರೀಕ್ಷೆಗಳೇನು?
ಬಜೆಟ್ ಮೇಲೆ ದೇಶದಾದ್ಯಂತ ಮಧ್ಯಮ ವರ್ಗ, ರೈತರು, ಉದ್ಯಮಿಗಳು ಮತ್ತು ಯುವಜನರಿಂದ ಭಾರೀ ನಿರೀಕ್ಷೆ ವ್ಯಕ್ತವಾಗಿದೆ. ತೆರಿಗೆದಾರರಿಗೆ ರಿಲೀಫ್, ಆದಾಯ ತೆರಿಗೆ ಮಿತಿ ವಿಸ್ತರಣೆ, ರೈತರಿಗೆ ಹೆಚ್ಚಿನ ನೆರವು, ಉದ್ಯೋಗ ಸೃಷ್ಟಿ, ಮೂಲಸೌಕರ್ಯ ಅಭಿವೃದ್ಧಿ ಹಾಗೂ ಹಣದುಬ್ಬರ ನಿಯಂತ್ರಣ ಪ್ರಮುಖ ನಿರೀಕ್ಷೆಗಳಾಗಿವೆ.
ಬಜೆಟ್ನಲ್ಲಿ ಕರ್ನಾಟಕದ ನಿರೀಕ್ಷೆಗಳೇನು?
ಅತಿ ಹೆಚ್ಚು ತೆರಿಗೆ ಪಾವತಿಸುವ ರಾಜ್ಯಗಳ ಪೈಕಿ ಕರ್ನಾಟಕವೂ ಒಂದಾಗಿದ್ದು, ಈ ಬಾರಿ ರಾಜ್ಯಕ್ಕೆ ನ್ಯಾಯ ಸಿಗುತ್ತದೆಯೇ ಎಂಬ ಪ್ರಶ್ನೆ ಎದುರಾಗಿದೆ. ಕೃಷ್ಣಾ ಮೇಲ್ದಂಡೆ, ಎತ್ತಿನಹೊಳೆ, ಮಹದಾಯಿ, ಭದ್ರಾ ಮೇಲ್ದಂಡೆ ಸೇರಿದಂತೆ ಪ್ರಮುಖ ನೀರಾವರಿ ಯೋಜನೆಗಳಿಗೆ ಅನುದಾನ, ಬೆಂಗಳೂರು ಮೂಲಸೌಕರ್ಯ ಹಾಗೂ ರೈಲು–ಮೆಟ್ರೋ ಯೋಜನೆಗಳಿಗೆ ನೆರವು ರಾಜ್ಯದ ಪ್ರಮುಖ ನಿರೀಕ್ಷೆಗಳಾಗಿವೆ
ಚುನಾವಣಾ ಲೆಕ್ಕಾಚಾರದ ನಡುವೆ ಮಂಡನೆಯಾಗುತ್ತಿರುವ ಬಜೆಟ್ ಕರ್ನಾಟಕಕ್ಕೆ ಸಿಹಿಯಾಗುತ್ತದೆಯೇ, ಅಥವಾ ಮತ್ತೊಮ್ಮೆ ನಿರಾಸೆಯಾಗಿ ಪರಿಣಮಿಸುತ್ತದೆಯೇ ಎಂಬ ಕುತೂಹಲ ರಾಜ್ಯಾದ್ಯಂತ ಹೆಚ್ಚಾಗಿದೆ.
