Ashwaveega News 24×7 ಫೆಬ್ರವರಿ 2026 – ನವದೆಹಲಿ : ಕೇಂದ್ರ ಸರ್ಕಾರ ಮಂಡಿಸಿರುವ ಇತ್ತೀಚಿನ ಬಜೆಟ್ ಅನ್ನು ‘ಗೇಮ್ ಚೇಂಜರ್’ ಎಂದು ಕರೆಯಲಾಗದಿದ್ದರೂ, ಶ್ರೀ ಸಾಮಾನ್ಯನ ಜೀವನಕ್ಕೆ ಸ್ಪರ್ಶಿಸುವ ಹಲವಾರು ಅಂಶಗಳನ್ನು ಒಳಗೊಂಡಿರುವ ಹೆಲ್ತಿ ಬಜೆಟ್ ಎಂದು ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಈ ಬಜೆಟ್ನ ಪ್ರಮುಖ ಸಕಾರಾತ್ಮಕ ಅಂಶವೆಂದರೆ – ಕ್ಯಾನ್ಸರ್ ಹಾಗೂ ಮಧುಮೇಹಿಗಳ ಔಷಧಿಗಳ ಬೆಲೆಯಲ್ಲಿ ಇಳಿಕೆ ಸಾಧ್ಯತೆ. ಇದರಿಂದ ದೀರ್ಘ ಕಾಲದ ಚಿಕಿತ್ಸೆಗೆ ಒಳಗಾಗುತ್ತಿರುವ ಲಕ್ಷಾಂತರ ರೋಗಿಗಳಿಗೆ ಆರ್ಥಿಕವಾಗಿ ಮಹತ್ವದ ಪರಿಹಾರ ದೊರಕುವ ನಿರೀಕ್ಷೆಯಿದೆ. ಇದಲ್ಲದೆ, ಗೃಹ ಸಾಲಗಳ ಮೇಲಿನ ಬಡ್ಡಿದರ ಇಳಿಕೆಯ ಸಾಧ್ಯತೆ ಕೂಡ ವ್ಯಕ್ತವಾಗಿದ್ದು, ಮಧ್ಯಮ ವರ್ಗದ ಮನೆ ಕನಸಿಗೆ ಇದು ಸಹಕಾರಿಯಾಗಲಿದೆ.
ದೇಶೀಯ ಉತ್ಪಾದನೆಗೆ ಒತ್ತು ನೀಡಿರುವ ಹಿನ್ನೆಲೆಯಲ್ಲಿ ದೇಸಿ ಸ್ಮಾರ್ಟ್ಫೋನ್, ಟಿವಿ ಸೇರಿದಂತೆ ಎಲೆಕ್ಟ್ರಾನಿಕ್ ವಸ್ತುಗಳ ಬೆಲೆ ಇಳಿಕೆಯಾಗುವ ಸಾಧ್ಯತೆ ಇದೆ.ಅದೇ ರೀತಿ, ಬ್ಯಾಟರಿ ಉತ್ಪಾದನೆ ಮತ್ತು ಪ್ರೋತ್ಸಾಹಕ ಯೋಜನೆಗಳ ಪರಿಣಾಮವಾಗಿ ಎಲೆಕ್ಟ್ರಿಕ್ ವಾಹನಗಳ ಬೆಲೆ ಕಡಿಮೆಯಾಗುವ ನಿರೀಕ್ಷೆಯೂ ಮೂಡಿದೆ.
ಆದರೆ, ಬಜೆಟ್ನ ಕೆಲ ಅಂಶಗಳು ಚಿಂತೆಗೆ ಕಾರಣವಾಗಿವೆ. ಅಂತಾರಾಷ್ಟ್ರೀಯ ಮಾರುಕಟ್ಟೆ ಹಾಗೂ ತೆರಿಗೆ ರಚನೆಯ ಪರಿಣಾಮವಾಗಿ ಚಿನ್ನ ಮತ್ತು ಬೆಳ್ಳಿ ಬೆಲೆಗಳು ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ.

ಮತ್ತೊಂದೆಡೆ , ನಿತ್ಯ ಬಳಕೆಯ ವಸ್ತುಗಳ ಬೆಲೆ ಏರಿಕೆಗೆ ಸ್ಪಷ್ಟ ಪರಿಹಾರ ಕ್ರಮಗಳು ಕಾಣಿಸದಿರುವುದು ಈ ಬಜೆಟ್ನ ಪ್ರಮುಖ ಕೊರತೆಯಾಗಿ ಪರಿಣಮಿಸಿದೆ. ಬೆಲೆ ಏರಿಕೆಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಹೆಚ್ಚುವರಿ ಕ್ರಮಗಳನ್ನು ಸರ್ಕಾರ ಕೈಗೊಳ್ಳಬೇಕೆಂಬ ಒತ್ತಾಯವೂ ಕೇಳಿಬರುತ್ತಿದೆ .
ಒಟ್ಟಿನಲ್ಲಿ, ಮೋದಿಯವರ ಈ ಬಜೆಟ್ ಆರ್ಥಿಕ ಕ್ರಾಂತಿಗೆ ದಾರಿ ಮಾಡುವ ಗೇಮ್ ಚೇಂಜರ್ ಆಗದಿದ್ದರೂ, ಶ್ರೀ ಸಾಮಾನ್ಯನ ಆರೋಗ್ಯ, ಮನೆ ಮತ್ತು ದಿನನಿತ್ಯದ ಬದುಕಿಗೆ ಸ್ಪರ್ಶಿಸುವ ಸಮತೋಲನದ ಬಜೆಟ್ ಎಂದು ಹೇಳಬಹುದಾಗಿದೆ.
