Ashwaveega News 24×7 ಫೆಬ್ರವರಿ 2026 : ಬೆಸ್ಕಾಂನಲ್ಲಿ ನಡೆಯುತ್ತಿರುವ ಅಕ್ರಮ ದಂಧೆಗಳಿಗೆ ಹೊಸ ಮುಖವೊಂದು ಬಯಲಾಗಿದೆ. ತಿಂಗಳುಗಳ ಹಿಂದಷ್ಟೇ ಡ್ರೈವರ್ ಆಗಿದ್ದ ವ್ಯಕ್ತಿ ಇಂದು ಬೆಸ್ಕಾಂನಲ್ಲಿ “ಡೀಲರ್” ಆಗಿ ಮಿಂಚುತ್ತಿರುವುದು ಅಧಿಕಾರಿಗಳೇ ಬೆಚ್ಚಿಬೀಳುವಂತೆ ಮಾಡಿದೆ. ಅಶ್ವವೇಗ ನ್ಯೂಸ್ ಬಹಿರಂಗಪಡಿಸಿದ ಈ ಎಕ್ಸ್ಕ್ಲೂಸಿವ್ ಸ್ಟೋರಿಯಲ್ಲಿ ಡೀಲರ್ ರುದ್ರನ ಖತರ್ನಾಕ್ ಆಟಗಳು ಒಂದೊಂದಾಗಿ ಬೆಳಕಿಗೆ ಬರುತ್ತಿವೆ.
ಬೆಸ್ಕಾಂ ಎನ್–4 ವಿಭಾಗದಲ್ಲಿ ಡ್ರೈವರ್ ಆಗಿದ್ದ ರುದ್ರೇಶ್, ಈಗ ಕಾಂಟ್ರಾಕ್ಟರ್ಗಳಿಗೆ ಕಾಂಟ್ರಾಕ್ಟ್ ಕೊಡಿಸುವ ‘ಪವರ್ ಬ್ರೋಕರ್’ ಆಗಿ ಬೆಳದಿದ್ದಾನೆ. ಗುತ್ತಿಗೆದಾರರು ಅಧಿಕಾರಿಗಳನ್ನು ಸಂಪರ್ಕಿಸುವುದಕ್ಕೂ ಮೊದಲು ರುದ್ರನ ಬಳಿಯೇ ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂಬ ಆರೋಪಗಳು ಕೇಳಿಬರುತ್ತಿವೆ.
ರುದ್ರೇಶನಿಗೆ ಭರ್ಜರಿ ಬಂಡವಾಳ ಒದಗಿಸಿದ ಮೂಲವೇ ಲೋಕಾಯುಕ್ತ. ಲೋಕಾಯುಕ್ತ ಕಚೇರಿಗೆ 3–4 ಕಾರುಗಳನ್ನು ಬಾಡಿಗೆಗೆ ನೀಡಿದ್ದ ರುದ್ರ, ಅಲ್ಲಿನ ಅಧಿಕಾರಿಗಳ ಸಲುಗೆ ಪಡೆದು ಅದನ್ನೇ ತನ್ನ ಶಕ್ತಿಯ ಅಸ್ತ್ರವಾಗಿ ಬಳಸುತ್ತಿದ್ದಾನೆ ಎಂಬ ಗಂಭೀರ ಆರೋಪಗಳು ಕೇಳಿಬರುತ್ತಿವೆ. ಲೋಕಾಯುಕ್ತರ ಲ್ಯಾಂಡ್ಲೈನ್ನಿಂದಲೇ ಬೆಸ್ಕಾಂ ಅಧಿಕಾರಿಗಳಿಗೆ ಕರೆ ಮಾಡಿಸಿ ತನ್ನ ಕೆಲಸಗಳನ್ನು ಸುಲಭವಾಗಿ ಮುಗಿಸಿಕೊಳ್ಳುತ್ತಿದ್ದಾನೆ .
ಅಷ್ಟೇ ಅಲ್ಲ, ಅಧಿಕಾರಿಗಳನ್ನು ಪುಸಲಾಯಿಸಲು ತಿರುಪತಿ ಲಡ್ಡು ಪ್ರಸಾದವನ್ನೇ ಅಸ್ತ್ರವಾಗಿ ಬಳಸುತ್ತಿದ್ದಾನೆ ಎಂಬ ಆರೋಪಗಳು ಸಹ ಬಹಿರಂಗವಾಗಿವೆ. “ಲಡ್ಡು ತಿಂದ ಅಧಿಕಾರಿಗಳಿಂದಲೇ ಕೆಲಸ ಮಾಡಿಸಿಕೊಳ್ಳುವ ಖತರ್ನಾಕ್ ಡೀಲರ್” ಎನ್ನುವ ಮಾತುಗಳು ಬೆಸ್ಕಾಂ ವಲಯದಲ್ಲಿ ಹರಿದಾಡುತ್ತಿವೆ.
ಬೆಸ್ಕಾಂನ ಹಿರಿಯ ಅಧಿಕಾರಿಗಳೇ ರುದ್ರನ ದಂಧೆಗಳನ್ನು ಕಣ್ಣಾರೆ ನೋಡುತ್ತಿದ್ದರೂ ಮೌನ ವಹಿಸಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ರುದ್ರನನ್ನು ಹತ್ತಿರ ಸೇರಿಸಿಕೊಳ್ಳುವ ಮುನ್ನ ಹುಷಾರ್… ಹುಷಾರ್… ಎಂದು ಅಶ್ವವೇಗ ನ್ಯೂಸ್ ಎಚ್ಚರಿಕೆ ನೀಡುತ್ತಿದೆ .
ಒಟ್ಟಾರೆ, ಡ್ರೈವರ್ನಿಂದ ಡೀಲರ್ವರೆಗೆ ರುದ್ರನ ಪಯಣ ಬೆಸ್ಕಾಂನಲ್ಲಿ ನಡೆಯುತ್ತಿರುವ ವ್ಯವಸ್ಥಿತ ಅಕ್ರಮಗಳ ಭಯಾನಕ ಚಿತ್ರಣವನ್ನು ಬಿಚ್ಚಿಟ್ಟಿದೆ. ಅಶ್ವವೇಗ ನ್ಯೂಸ್ನಲ್ಲಿ ಮುಂದುವರಿಯಲಿದೆ ಡೀಲರ್ ರುದ್ರನ ಎಕ್ಸ್ಕ್ಲೂಸಿವ್ ಸ್ಟೋರಿ .
