Ashwaveega News 24×7 ಫೆಬ್ರವರಿ 2026 : ಪೊಲೀಸ್ ಇಲಾಖೆ ಜನರ ರಕ್ಷಕನಾ, ಅಥವಾ ಜನರಿಂದಲೇ ವಸೂಲಿಗೆ ಇಳಿದ ಇಲಾಖೆಯಾ ? ವಿಜಯಪುರದಲ್ಲಿ ಬೆಳಕಿಗೆ ಬಂದಿರುವ ಘಟನೆ ಈ ಪ್ರಶ್ನೆಗೆ ಮತ್ತೆ ಜೀವ ತುಂಬಿದೆ . ವಾಹನ ಸವಾರರಿಂದ ನೇರವಾಗಿ ಹಣ ವಸೂಲಿ ಮಾಡಿರುವ ಆರೋಪದಲ್ಲಿ ಪಿಎಸ್ಐ ವಿಜಯ್ ಕುಮಾರ್ ಕಮ್ಮಾರ ಸಿಲುಕಿದ್ದು, ಸಾರ್ವಜನಿಕ ವಲಯದಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.
ವಾಹನ ಸವಾರರಿಂದ 400 ರೂಪಾಯಿ ವಸೂಲಿ ಮಾಡಿದ್ದು, ಕೇವಲ 200 ರೂಪಾಯಿಗೆ ಮಾತ್ರ ರಸೀದಿ ನೀಡಿರುವ ಘಟನೆ ಸ್ಥಳದಲ್ಲೇ ಚಿತ್ರೀಕರಣವಾಗಿದೆ. ಉಳಿದ 200 ರೂಪಾಯಿ ಎಲ್ಲಿ ಹೋಯಿತು ಎಂಬ ಪ್ರಶ್ನೆಗೆ ಪೊಲೀಸಪ್ಪ ಬಳಿ ಉತ್ತರವಿಲ್ಲ. ಕಣ್ಣ ಮುಂದೆ ಜನರು ಪ್ರಶ್ನೆ ಮಾಡಿದರೂ “ಇಲ್ಲ.. ಇಲ್ಲ” ಎಂದು ನಿರಾಕರಿಸಿದ ದೃಶ್ಯಗಳು ಜನರ ನಂಬಿಕೆಗೆ ಭಾರೀ ಪೆಟ್ಟು ನೀಡಿವೆ.
ಈ ವೇಳೆ KRS ಮುಖಂಡ ಶಿವಾನಂದ ಯಡಹಳ್ಳಿ ಪ್ರಶ್ನೆ ಕೇಳುತ್ತಿದ್ದಂತೆಯೇ ಪಿಎಸ್ಐ ವಿಜಯ್ ಕುಮಾರ್ ಕಮ್ಮಾರ ಕಕ್ಕಾಬಿಕ್ಕಿಯಾಗಿರುವ ದೃಶ್ಯಗಳು ವೀಡಿಯೋದಲ್ಲಿ ಸ್ಪಷ್ಟವಾಗಿ ಕಾಣಿಸುತ್ತವೆ. ಕೂಲಿ ಕಾರ್ಮಿಕರ ದುಡ್ಡನ್ನೂ ಬಿಡದ ಮಟ್ಟಿಗೆ ವಿಜಯಪುರ ಪೊಲೀಸರು ಇಳಿದಿದ್ರಾ? ಎಂಬ ಪ್ರಶ್ನೆ ಇದೀಗ ಜನಸಾಮಾನ್ಯರಲ್ಲಿ ಎದ್ದಿದೆ.
ಘಟನೆಯ ವೇಳೆ ಮಹಾರಾಷ್ಟ್ರ ಮೂಲದ ಜನರ ಮುಂದೆ ಕರ್ನಾಟಕ ರಾಜ್ಯದ ಮಾನ ಹರಾಜಾಗಿರುವುದೂ ಸಾರ್ವಜನಿಕರಿಗೆ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ. “ಪೊಲೀಸ್ ಎಂದರೆ ಗೌರವ” ಎಂಬ ನಂಬಿಕೆಗೆ ಈ ಘಟನೆ ದೊಡ್ಡ ಮಸಿ ಬಳಿದಂತಾಗಿದೆ ಎಂದು ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
“ಪಿಎಸ್ಐ ವಿಜಯ್ ಕುಮಾರ್ ಕಮ್ಮಾರ, ಇದು ನಿಮಗೆ ಸರಿ ಅನಿಸುತ್ತಾ?” ಎಂಬ ಪ್ರಶ್ನೆ ಈಗ ಸೋಷಿಯಲ್ ಮೀಡಿಯಾದಲ್ಲೂ ಗಂಭೀರ ಚರ್ಚೆಗೆ ಗ್ರಾಸವಾಗಿದೆ. ಪೊಲೀಸ್ ಇಲಾಖೆಯ ಮೇಲಧಿಕಾರಿಗಳು ಈ ಪ್ರಕರಣದ ಬಗ್ಗೆ ತಕ್ಷಣ ಕ್ರಮ ಕೈಗೊಳ್ಳಬೇಕೆಂಬ ಒತ್ತಾಯ ಹೆಚ್ಚಾಗುತ್ತಿದೆ.
ಒಟ್ಟಾರೆ, ಜನರೇ ಈ ವೀಡಿಯೋ ನೋಡಿ, ನಂತರ ಸತ್ಯ–ಅಸತ್ಯವನ್ನು ನೀವೇ ನಿರ್ಧರಿಸಿ ಎಂಬ ಸಂದೇಶದೊಂದಿಗೆ ಈ ಘಟನೆ ಪೊಲೀಸ್ ಇಲಾಖೆಯೊಳಗಿನ ಭ್ರಷ್ಟಾಚಾರದ ಕಹಿ ಸತ್ಯವನ್ನು ಬಿಚ್ಚಿಟ್ಟಿದೆ.
