Ashwaveega News 24×7 ಫೆಬ್ರವರಿ 2026 : ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಬಿಜೆಪಿ ನಾಯಕರ ನಡುವೆ ವಾಕ್ಸಮರ ತೀವ್ರಗೊಂಡಿದೆ. “ಅಸಹಾಯಕ ಮುಖ್ಯಮಂತ್ರಿ” ಎಂದು ಬಿಜೆಪಿ ಶಾಸಕ ಸುನಿಲ್ ಕುಮಾರ್ ಮಾಡಿದ ಹೇಳಿಕೆಗೆ ಸಿಎಂ ಸಿದ್ದರಾಮಯ್ಯ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ.
ಸದನದಲ್ಲಿ ಮಾತನಾಡಿದ ಸಿದ್ದರಾಮಯ್ಯ, “ಹಿಂದೆ ಇದ್ದ ಸಿದ್ದರಾಮಯ್ಯ ಈಗ ಇಲ್ಲ ಎಂದು ಸುನಿಲ್ ಕುಮಾರ್ ಹೇಳಿದ್ದಾರೆ. ಆದರೆ 2013ರಿಂದ 2018ರ ವರೆಗೆ ನಾನು ಮುಖ್ಯಮಂತ್ರಿ ಆಗಿದ್ದಾಗಲೂ ನೀವು ಸುಮ್ಮನೆ ಇದ್ದಿರಲಿಲ್ಲ” ಎಂದು ವ್ಯಂಗ್ಯವಾಡಿದರು. “ನಾನು ಸಿಎಂ ಆಗಿದ್ದಾಗ ನೀವೆಲ್ಲಾ ಸುಮ್ಮನೆ ಇದ್ರಾ..? ಆವಾಗಲೂ ಟೀಕೆ ಮಾಡ್ತಾ ಇದ್ರಿ, ಈಗಲೂ ಮಾಡ್ತೀರಾ” ಎಂದು ಪ್ರಶ್ನಿಸಿದರು.
“ಹಿಂದೆ ಇದ್ದ ಸಿದ್ದರಾಮಯ್ಯನೇ ಈಗಲೂ ಇದ್ದಾನೆ. ಮುಂದೆಯೂ ಇದೇ ಸಿದ್ದರಾಮಯ್ಯನೇ ಇರೋದು” ಎಂದು ಆತ್ಮವಿಶ್ವಾಸದ ಧಾಟಿಯಲ್ಲಿ ಹೇಳಿದ ಸಿಎಂ, ತಮ್ಮ ನಾಯಕತ್ವದ ಬಗ್ಗೆ ಯಾವುದೇ ಅನುಮಾನ ಇಲ್ಲ ಎಂದು ಸ್ಪಷ್ಟಪಡಿಸಿದರು.
ಅಸಹಾಯಕತೆ ಕುರಿತ ಟೀಕೆಗೆ ಉತ್ತರಿಸಿದ ಸಿದ್ದರಾಮಯ್ಯ, “ಒಮ್ಮೊಮ್ಮೆ ಅಸಹಾಯಕತೆ ವ್ಯಕ್ತಪಡಿಸುವ ಸ್ಥಿತಿ ಬರಬಹುದು. ಆದರೆ ಅದು ದುರ್ಬಲತೆಯಲ್ಲ. ಅಸತ್ಯದ ಎದುರು ಸತ್ಯ ಅಸಹಾಯಕವಾಗಿರುವಂತೆ ಕಾಣಬಹುದು” ಎಂದು ಹೇಳಿದರು. ಸತ್ಯದ ಪರವಾಗಿ ನಿಲ್ಲುವಾಗ ಎದುರಾಗುವ ಸವಾಲುಗಳನ್ನು ಬಿಜೆಪಿಯವರು ತಪ್ಪಾಗಿ ಅರ್ಥೈಸುತ್ತಿದ್ದಾರೆ ಎಂದು ಅವರು ಹೇಳಿದರು.
ಸದನದಲ್ಲಿನ ಈ ಚರ್ಚೆ ಆಡಳಿತ–ವಿಪಕ್ಷಗಳ ನಡುವಿನ ರಾಜಕೀಯ ಸಂಘರ್ಷವನ್ನು ಮತ್ತಷ್ಟು ತೀವ್ರಗೊಳಿಸಿದ್ದು, “ಅಸಹಾಯಕ ಸಿಎಂ” ಎನ್ನುವ ಪದ ಬಳಕೆಯೇ ದೊಡ್ಡ ರಾಜಕೀಯ ಚರ್ಚೆಗೆ ಕಾರಣವಾಗಿದೆ.
ಒಟ್ಟಾರೆ, ಬಿಜೆಪಿ ಟೀಕೆಗೆ ಸಿಎಂ ಸಿದ್ದರಾಮಯ್ಯ ನೀಡಿದ ಕೌಂಟರ್ ಸದನದಲ್ಲಿ ಗಮನಸೆಳೆದಿದ್ದು, ಮುಂದಿನ ದಿನಗಳಲ್ಲಿ ಈ ಮಾತಿನ ಯುದ್ಧ ಇನ್ನಷ್ಟು ಗಟ್ಟಿಯಾಗುವ ಲಕ್ಷಣಗಳು ಕಾಣಿಸುತ್ತಿವೆ.
