Ashwaveega News 24×7 ಫೆಬ್ರವರಿ 03 -2026 : ಮುಂದಿನ ವಿಧಾನಸಭೆ ಚುನಾವಣೆಗೆ ಸಂಬಂಧಿಸಿದಂತೆ ಜೆಡಿಎಸ್ ಯುವ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ತಮ್ಮ ಚುನಾವಣಾ ಕಣದ ಬಗ್ಗೆ ಸ್ಪಷ್ಟ ಘೋಷಣೆ ಮಾಡಿದ್ದಾರೆ. ಬೇರೆ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ ಎಂಬ ವದಂತಿಗಳಿಗೆ ಬ್ರೇಕ್ ಹಾಕಿರುವ ನಿಖಿಲ್, “ನಾನು ರಾಮನಗರ ಬಿಟ್ಟು ಬೇರೆ ಯಾವುದೇ ಕ್ಷೇತ್ರದಿಂದ ಸ್ಪರ್ಧಿಸುವುದಿಲ್ಲ” ಎಂದು ಖಡಕ್ ಆಗಿ ಹೇಳಿದ್ದಾರೆ.
ರಾಮನಗರ ಜಿಲ್ಲೆ ನಮ್ಮ ತಾತ ಹಾಗೂ ತಂದೆಯವರ ಕರ್ಮಭೂಮಿ ಎಂದು ಹೇಳಿದ ನಿಖಿಲ್, “1994ರಲ್ಲಿ ಹಾಸನದಿಂದ ಬಂದ ನಮ್ಮ ತಾತ ಹೆಚ್ಡೀ ದೇವೇಗೌಡರಿಗೆ ರಾಜಕೀಯವಾಗಿ ಮರುಜನ್ಮ ನೀಡಿದ ಕ್ಷೇತ್ರವೇ ರಾಮನಗರ. ಇಂತಹ ಮಣ್ಣನ್ನು ಬಿಟ್ಟು ನಾನು ಎಲ್ಲೂ ಹೋಗುವುದಿಲ್ಲ” ಎಂದು ಭಾವನಾತ್ಮಕವಾಗಿ ಹೇಳಿದರು.
ರಾಮನಗರ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷದ ಬಲಿಷ್ಠ ಮುಖಂಡರಿದ್ದಾರೆ, ನಮ್ಮ ಕುಟುಂಬವನ್ನು ಪ್ರೀತಿಸುವ ದೊಡ್ಡ ವರ್ಗ ಅಲ್ಲಿಯೇ ಇದೆ. “ಅವರನ್ನು ನಡುನೀರಿನಲ್ಲಿ ಕೈಬಿಟ್ಟು ಹೋಗುವ ಜಾಯಮಾನ ನಮ್ಮದಲ್ಲ” ಎಂದು ನಿಖಿಲ್ ಸ್ಪಷ್ಟಪಡಿಸಿದರು.
ಇನ್ನು ಬೇರೆ ಕ್ಷೇತ್ರಗಳ ಕುರಿತು ಹರಡಿರುವ ಊಹಾಪೋಹಗಳಿಗೂ ನಿಖಿಲ್ ತೆರೆ ಎಳೆದಿದ್ದಾರೆ. “ನಾನು ಮಂಡ್ಯಗೂ ಹೋಗಲ್ಲ, ಮಧುಗಿರಿಗೂ ಹೋಗಲ್ಲ, ಚಾಮರಾಜ ಕ್ಷೇತ್ರಕ್ಕೂ ಹೋಗಲ್ಲ. ರಾಮನಗರವೇ ನನ್ನ ಕಾರ್ಯಕ್ಷೇತ್ರ” ಎಂದು ನೇರವಾಗಿ ಹೇಳಿದ್ದಾರೆ. “ಯಾರಲ್ಲೂ ಗೊಂದಲ ಬೇಡ. ಈ ವದಂತಿಗಳನ್ನು ಯಾರು ಹಬ್ಬಿಸುತ್ತಿದ್ದಾರೋ ಗೊತ್ತಿಲ್ಲ” ಎಂದು ಹೇಳಿದ ನಿಖಿಲ್, 2028ರ ಚುನಾವಣೆಗೆ ಈಗಲೇ ಸಿದ್ಧತೆ ಆರಂಭಿಸಿರುವ ಸೂಚನೆ ನೀಡಿದ್ದಾರೆ.
ಒಟ್ಟಿನಲ್ಲಿ, ನಿಖಿಲ್ ಕುಮಾರಸ್ವಾಮಿಯ ಈ ಸ್ಪಷ್ಟ ನುಡಿ, ಜೆಡಿಎಸ್ ಒಳಗೂ ಹೊರಗೂ ಹರಡಿದ್ದ ಊಹಾಪೋಹಗಳಿಗೆ ಪೂರ್ಣ ವಿರಾಮ ಹಾಕಿದ್ದು, ರಾಮನಗರವೇ ಅವರ ರಾಜಕೀಯ ಕುರುಕ್ಷೇತ್ರ ಎಂಬ ಸಂದೇಶವನ್ನು ಗಟ್ಟಿಯಾಗಿ ರವಾನಿಸಿದೆ.
