Ashwaveega News 24×7 ಫೆಬ್ರವರಿ 03 -2026 : ಬೆಂಗಳೂರು : ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಭಾರೀ ವಿಮಾನ ದುರಂತವೊಂದು ಜಸ್ಟ್ ಮಿಸ್ ಆಗಿದೆ. ಲಂಡನ್ನಿಂದ ಬೆಂಗಳೂರಿಗೆ ಆಗಮಿಸುತ್ತಿದ್ದ ಏರ್ ಇಂಡಿಯಾ ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದು, ಅದೃಷ್ಟವಶಾತ್ ಯಾವುದೇ ಅಪಘಾತ ಸಂಭವಿಸದೇ 200ಕ್ಕೂ ಹೆಚ್ಚು ಪ್ರಯಾಣಿಕರು ಸುರಕ್ಷಿತವಾಗಿ ಪಾರಾಗಿದ್ದಾರೆ.
ಲಂಡನ್ TO ಬೆಂಗಳೂರು ಮಾರ್ಗದಲ್ಲಿ ಹಾರಾಟ ನಡೆಸುತ್ತಿದ್ದ ಏರ್ ಇಂಡಿಯಾ ವಿಮಾನದಲ್ಲಿ ಇಂಧನ ಪೂರೈಕೆ ಸಂಬಂಧಿಸಿದ ಗಂಭೀರ ತಾಂತ್ರಿಕ ದೋಷ ಕಂಡುಬಂದಿದೆ. ವಿಮಾನದಲ್ಲಿದ್ದ ಇಂಧನ ಪೂರೈಸುವ ಸ್ವಿಚ್ ಎರಡು ಬಾರಿ ತನ್ನಷ್ಟಕ್ಕೇ ಕಟ್ಆಫ್ ಆಗಿದ್ದು, ರನ್ ಮೋಡ್ಗೆ ಹಾಕಿದರೂ ಮರುಮರು ಆಫ್ ಮೋಡ್ಗೆ ಹೋಗುತ್ತಿತ್ತು .
ವಿಮಾನ ರನ್ ಮೋಡ್ನಲ್ಲಿದ್ದರೆ ಮಾತ್ರ ಸಂಚಾರ ಸಾಧ್ಯವಾಗುತ್ತದೆ. ಆದರೆ ಸ್ವಿಚ್ ಕಟ್ಆಫ್ ಮೋಡ್ಗೆ ಹೋದರೆ ಇಂಧನ ಪೂರೈಕೆ ಸಂಪೂರ್ಣವಾಗಿ ನಿಲ್ಲುತ್ತದೆ. ಇಂತಹ ಸ್ಥಿತಿಯಲ್ಲಿ ಯಾವುದೇ ಕ್ಷಣದಲ್ಲಿ ವಿಮಾನ ಪತನಗೊಳ್ಳುವ ಸಾಧ್ಯತೆ ಇತ್ತು ಎಂದು ತಿಳಿಸಿದ್ದಾರೆ.
ವಿಮಾನದಲ್ಲಿ ಎರಡು ಎಂಜಿನ್ಗಳು ಇದ್ದ ಕಾರಣ ಭಾರೀ ದುರಂತ ತಪ್ಪಿದಂತಾಗಿದೆ. ಒಂದು ಎಂಜಿನ್ನಲ್ಲಿ ತಾಂತ್ರಿಕ ಸಮಸ್ಯೆ ಎದುರಾದರೂ, ಮತ್ತೊಂದು ಎಂಜಿನ್ ಸಹಾಯದಿಂದ ಪೈಲಟ್ಗಳು ವಿಮಾನವನ್ನು ಸುರಕ್ಷಿತವಾಗಿ ಲ್ಯಾಂಡ್ ಮಾಡಲು ಯಶಸ್ವಿಯಾಗಿದ್ದಾರೆ.
ಸಮಸ್ಯೆ ಕಾಣಿಸಿಕೊಂಡ ತಕ್ಷಣವೇ ಪೈಲಟ್ಗಳು ಎಚ್ಚರಿಕೆ ವಹಿಸಿ ತುರ್ತು ನಿರ್ಧಾರ ಕೈಗೊಂಡಿದ್ದು, ವಿಮಾನವನ್ನು ಯಾವುದೇ ತೊಂದರೆ ಇಲ್ಲದೇ ಲ್ಯಾಂಡ್ ಮಾಡಲಾಗಿದೆ. ಮೊದಲೇ ದೋಷವನ್ನು ಪತ್ತೆ ಹಚ್ಚಿದ ಪೈಲಟ್ಗಳ ಸಮಯಪ್ರಜ್ಞೆಯಿಂದ ಅತಿದೊಡ್ಡ ವಿಮಾನ ದುರಂತ ತಪ್ಪಿದಂತಾಗಿದೆ.
ಈ ತಾಂತ್ರಿಕ ದೋಷವು ವಿಮಾನ ಹಾರಾಟದ ಯಾವ ಹಂತದಲ್ಲಿ ಕಾಣಿಸಿಕೊಂಡಿತು ? ಹಾರಾಟದ ಮಧ್ಯೆ ಏನಾದರೂ ಸಮಸ್ಯೆ ಉಂಟಾಯಿತೇ ? ಎಂಬ ಪ್ರಶ್ನೆಗಳು ಇದೀಗ ಎದ್ದಿದ್ದು, ಈ ಕುರಿತು ಏರ್ ಇಂಡಿಯಾ ಸಂಸ್ಥೆ ಡಿಜಿಸಿಎ (DGCA)ಗೆ ವಿವರವಾದ ವರದಿ ಸಲ್ಲಿಸಿದೆ ಎಂದು ತಿಳಿದುಬಂದಿದೆ. ಈ ಘಟನೆ ಬಗ್ಗೆ ಸಂಪೂರ್ಣ ತನಿಖೆ ನಡೆಯುತ್ತಿದ್ದು, ಪ್ರಯಾಣಿಕರ ಸುರಕ್ಷತೆ ದೃಷ್ಟಿಯಿಂದ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಏರ್ ಇಂಡಿಯಾ ಮೂಲಗಳು ಮಾಹಿತಿ ನೀಡಿವೆ.
