Ashwaveega News 24×7 ಫೆಬ್ರವರಿ 03 -2026 – ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಈ ವಾರ ಅಂತಾರಾಷ್ಟ್ರೀಯ ಕೃಷಿ ಮೇಳ ಆಯೋಜನೆಗೆ ರಾಜ್ಯ ಸರ್ಕಾರ ಸಿದ್ಧತೆ ನಡೆಸಿದೆ. ಫೆಬ್ರವರಿ 6, 7 ಮತ್ತು 8ರಂದು ಮೂರು ದಿನಗಳ ಕಾಲ ಅಂತಾರಾಷ್ಟ್ರೀಯ ವಾಣಿಜ್ಯ ಮೇಳ ಹಾಗೂ ಕೃಷಿ ಮೇಳವನ್ನು ಕೃಷಿ ಇಲಾಖೆ ಆಯೋಜಿಸುತ್ತಿದೆ.
ಬೆಂಗಳೂರಿನ ಅರಮನೆ ಮೈದಾನದ ತ್ರಿಪುರ ವಾಸಿನಿ ಗೇಟ್ ಮೈದಾನದಲ್ಲಿ ಮೇಳ ನಡೆಯಲಿದ್ದು, ಕೃಷಿ ತಜ್ಞರು, ಕೃಷಿ ವಿಜ್ಞಾನಿಗಳು, ಕೃಷಿ ಅಧಿಕಾರಿಗಳು ಸೇರಿದಂತೆ ದೇಶ-ವಿದೇಶಗಳಿಂದ ಅನೇಕ ಗಣ್ಯರು ಭಾಗವಹಿಸಲಿದ್ದಾರೆ. ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಮೇಳಕ್ಕೆ ಅಧಿಕೃತ ಚಾಲನೆ ನೀಡಲಿದ್ದು, ಕೇಂದ್ರ ಸಚಿವರನ್ನೂ ಆಹ್ವಾನಿಸಲಾಗಿದೆ.
ಅನ್ನದಾತರನ್ನು ಉದ್ಯಮಿದಾತರನ್ನಾಗಿಸುವ ಉದ್ದೇಶದೊಂದಿಗೆ ಈ ಕೃಷಿ ಮೇಳ ಆಯೋಜಿಸಲಾಗಿದ್ದು, ಕೃಷಿ ತಂತ್ರಜ್ಞಾನ, ಕೃಷಿ ಬ್ರಾಂಡಿಂಗ್, ಮೌಲ್ಯವರ್ಧನೆ ಹಾಗೂ ಜಾಗತಿಕ ಮಾರುಕಟ್ಟೆಗಳೊಂದಿಗೆ ಸಂಪರ್ಕ ಸಾಧಿಸಲು ರೈತರಿಗೆ ವೇದಿಕೆ ಕಲ್ಪಿಸಲಾಗುತ್ತಿದೆ. ಮೇಳದಲ್ಲಿ ನೂರಾರು ಮಳಿಗೆಗಳು ಸ್ಥಾಪನೆಯಾಗಲಿದ್ದು, ರೈತ ಉತ್ಪಾದಕ ಸಂಸ್ಥೆಗಳು (FPOs), ರೈತಸ್ನೇಹಿ ಕಂಪನಿಗಳು, ಆಧುನಿಕ ಕೃಷಿ ಉಪಕರಣಗಳು ಹಾಗೂ ತಂತ್ರಜ್ಞಾನ ಆಧಾರಿತ ಸಲಕರಣೆಗಳು ಪ್ರದರ್ಶನಕ್ಕೆ ಬರಲಿವೆ.
ರೈತರನ್ನು ಉದ್ಯಮಿಗಳನ್ನಾಗಿಸುವ ಪ್ರಯತ್ನ, ಉತ್ಪಾದನೆಯಿಂದ ಮಾರುಕಟ್ಟೆಯವರೆಗಿನ ಬ್ರಾಂಡಿಂಗ್ ಬಲವರ್ಧನೆ, ಕೃಷಿ ಲಾಭದಾಯಕ ಕ್ಷೇತ್ರ ಎಂಬ ಆತ್ಮಸ್ಥೈರ್ಯ ಮೂಡಿಸುವುದು ಮೇಳದ ಪ್ರಮುಖ ಉದ್ದೇಶಗಳಾಗಿವೆ ಎಂದು ಸಚಿವರು ಹೇಳಿದರು.
ಸಮಗ್ರ ಕೃಷಿ, ಆಧುನಿಕ ತಂತ್ರಜ್ಞಾನ, ಹೊಸ ತಳಿಗಳ ಪರಿಚಯ, ಸಿರಿಧಾನ್ಯಗಳ ಮಹತ್ವ ಕುರಿತು ವಿಶೇಷ ಕಾರ್ಯಾಗಾರಗಳು ನಡೆಯಲಿದ್ದು, ಕೃಷಿ ಸ್ಥಿರತೆ ಕಾಪಾಡಿಕೊಳ್ಳುವುದು ಮುಂದಿನ ಸವಾಲು ಎಂದು ಅವರು ಅಭಿಪ್ರಾಯಪಟ್ಟರು.
ಯುವಕರು ಹಾಗೂ ಮಹಿಳೆಯರನ್ನು ಕೃಷಿ ಉದ್ಯಮಿಗಳನ್ನಾಗಿಸುವ ಗುರಿಯೊಂದಿಗೆ, ಕೃಷಿ ಆರಂಭದಿಂದ ಕೊಯ್ದಿನವರೆಗಿನ ಸಂಪೂರ್ಣ ಮಾಹಿತಿಯನ್ನು ಒಂದೇ ವೇದಿಕೆಯಲ್ಲಿ ನೀಡುವ ಪ್ರಯತ್ನ ಈ ಮೇಳದಲ್ಲಿದೆ ಎಂದು ಸಚಿವರು ಹೇಳಿದರು.
