Ashwaveega News 24×7 ಫೆಬ್ರವರಿ 05 -2026 – ನಗರದ ಜೀವನಾಡಿ ಅನ್ನಿಸಿಕೊಂಡಿರುವ ನಮ್ಮ ಮೆಟ್ರೋ ಈಗ ಕೆಲವರಿಗೆ ದೊಡ್ಡ ತಲೆನೋವಾಗಿಬಿಟ್ಟಿದೆ. ರಾಜಾಜಿನಗರ ಮೆಟ್ರೋ ನಿಲ್ದಾಣದ ಸುತ್ತಮುತ್ತ ವಾಸಿಸುವ ಸ್ಥಳೀಯ ನಿವಾಸಿಗಳು ದಿನವೂ ರಗಳೆ ಅನುಭವಿಸುತ್ತಿದ್ದಾರೆ.
ಮೆಟ್ರೋ ನಿಲ್ದಾಣಕ್ಕೆ ಬರುವ ಪ್ರಯಾಣಿಕರಿಗೆ ಪಾರ್ಕಿಂಗ್ ವ್ಯವಸ್ಥೆ ಇಲ್ಲದ ಕಾರಣ, ಅಕ್ಕಪಕ್ಕದ ಮನೆಗಳ ಮುಂದೆಲೇ ವಾಹನಗಳನ್ನು ನಿಲ್ಲಿಸಲಾಗುತ್ತಿದೆ. ‘ನೋ ಪಾರ್ಕಿಂಗ್’ ಬೋರ್ಡ್ ಇದ್ದರೂ ಜನರು ಡೋಂಟ್ ಕೇರ್ ಎನ್ನುವ ಸ್ಥಿತಿ.
ಮನೆ ಮುಂದೆ ಹೀಗೆ ವಾಹನ ಪಾರ್ಕ್ ಮಾಡಿದ್ರೆ, ಮನೆಯವರು ತಮ್ಮದೇ ವಾಹನ ಹೊರ ತೆಗೆಯೋದು ಹೇಗೆ ಅನ್ನೋದೇ ದೊಡ್ಡ ಪ್ರಶ್ನೆ. ಪಾರ್ಕ್ ಮಾಡ್ಬೇಡಿ ಅಂತ ಕೈ ಮುಗಿದು ಕೇಳಿಕೊಂಡ್ರೂ ಪ್ರಯೋಜನವೇ ಇಲ್ಲ ಅಂತ ಸ್ಥಳೀಯರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ಬೆಳಗ್ಗೆ 6 ಗಂಟೆಗೆ ಪಾರ್ಕ್ ಮಾಡಿದ ವಾಹನಗಳು, ರಾತ್ರಿ 10ರ ನಂತರವೇ ತೆಗೆದುಕೊಂಡು ಹೋಗ್ತಾರೆ ಅನ್ನೋದು ನಿವಾಸಿಗಳ ಆರೋಪ. ಇದರಿಂದ ದಿನವಿಡೀ ಭಾರೀ ತೊಂದರೆ ಎದುರಿಸಬೇಕಾಗಿದೆ ಅಂತ ಅವರು ಹೇಳ್ತಿದ್ದಾರೆ. ಪೊಲೀಸರು ‘ಪಾರ್ಕಿಂಗ್ ಮಾಡಿದ್ರೆ ₹1000 ಫೈನ್’ ಅಂತ ಬೋರ್ಡ್ ಹಾಕಿದ್ದರೂ, ಫೈನ್ ಬಿದ್ದರೂ ತಲೆ ಕೆಡಿಸಿಕೊಳ್ಳದ ಮೆಟ್ರೋ ಪ್ರಯಾಣಿಕರು ಅನ್ನೋದು ಸ್ಥಳೀಯರ ಅಸಮಾಧಾನ.
“ಬೋರ್ಡ್ ಆದ್ರೂ ಹಾಕಿ, ಏನಾದ್ರೂ ಮಾಡಿ… ನಾವು ಹೀಗೆ ಕಷ್ಟ ಪಡೋದು ಬೇಡ” ಅಂತ ಸ್ಥಳೀಯರು ಅಧಿಕಾರಿಗಳಿಗೆ ಮನವಿ ಮಾಡ್ತಿದ್ದಾರೆ. ಮೆಟ್ರೋ ಆಡಳಿತ, ಟ್ರಾಫಿಕ್ ಪೊಲೀಸ್ ಮತ್ತು ಬಿಬಿಎಂಪಿ ಅಧಿಕಾರಿಗಳು ಈ ಸಮಸ್ಯೆಗೆ ಯಾವಾಗ ಶಾಶ್ವತ ಪರಿಹಾರ ಕೊಡ್ತಾರೆ ಅನ್ನೋದು ಈಗ ಎಲ್ಲರ ಪ್ರಶ್ನೆ.
