Ashwaveega News 24×7 ಫೆಬ್ರವರಿ 05 -2026 – ಬೆಂಗಳೂರು: ಅತ್ಯಾಚಾರ ಸಂತ್ರಸ್ತೆಯನ್ನು ಅಪಹರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಜೆಡಿಎಸ್ ನಾಯಕ, ಮಾಜಿ ಸಚಿವ ಹೆಚ್ಡಿ ರೇವಣ್ಣ ಅವರಿಗೆ ಕರ್ನಾಟಕ ಹೈಕೋರ್ಟ್ನಿಂದ ಭಾರೀ ಹಿನ್ನಡೆ ಎದುರಾಗಿದೆ. ಪ್ರಕರಣದಲ್ಲಿ ತನಿಖಾಧಿಕಾರಿಗಳು ದೋಷಾರೋಪಣೆ ಸಲ್ಲಿಸದಂತೆ ನೀಡಿದ್ದ ಮಧ್ಯಂತರ ತಡೆಯಾಜ್ಞೆಯನ್ನು ಹೈಕೋರ್ಟ್ ತೆರವುಗೊಳಿಸಿದೆ.
ನ್ಯಾಯಮೂರ್ತಿ ಸುನಿಲ್ ದತ್ ಯಾದವ್ ಅವರಿದ್ದ ಹೈಕೋರ್ಟ್ ಪೀಠ ಈ ಆದೇಶ ನೀಡಿದ್ದು, ರೇವಣ್ಣ ಪರವಾಗಿ ಸಲ್ಲಿಸಿದ್ದ ವಿಚಾರಣೆ ಮುಂದೂಡುವ ಮನವಿಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿತು.
ವಿಚಾರಣೆ ವೇಳೆ ರೇವಣ್ಣ ಪರ ವಕೀಲರು, “ಮ್ಯಾಜಿಸ್ಟ್ರೇಟ್ ಕೋರ್ಟ್ಗೆ ಹೋಗಬೇಕಿದೆ. ಹೀಗಾಗಿ ವಿಚಾರಣೆ ಮುಂದೂಡಬೇಕು” ಎಂದು ಕೋರಿದರು. ಆದರೆ ಈ ಮನವಿಗೆ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಪೀಠ,
“ಇದು ಸಾಂವಿಧಾನಿಕ ನ್ಯಾಯಾಲಯ. ಇದರ ಅಧಿಕಾರವನ್ನು ಕುಗ್ಗಿಸಬೇಡಿ. ಇದು ಅಹಂನ ವಿಚಾರವಲ್ಲ. ಪ್ರಕ್ರಿಯೆ ಬಗ್ಗೆ ನಿಮಗೆ ತಿಳಿದಿರಬೇಕು” ಎಂದು ಕಟುವಾಗಿ ಪ್ರತಿಕ್ರಿಯಿಸಿತು.
ವಕೀಲರ ವಾದ ಶೈಲಿಯ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಾಲಯ, ರೇವಣ್ಣ ಅವರು ವಿಚಾರಣೆ ಮುಂದೂಡಲು ಸಲ್ಲಿಸಿದ ಅರ್ಜಿಗೆ ‘ಕ್ಲಾಸ್’ ತೆಗೆದುಕೊಂಡಂತಾಯಿತು.
ಆದರೆ ಪ್ರಕರಣದ ಮುಂದಿನ ವಿಚಾರಣೆಯನ್ನು ಎರಡು ವಾರಗಳ ಕಾಲ ಮುಂದೂಡಲು ಹೈಕೋರ್ಟ್ ಆದೇಶಿಸಿದೆ. ಮಧ್ಯಂತರ ತಡೆಯಾಜ್ಞೆ ತೆರವಾಗಿರುವುದರಿಂದ ಇದೀಗ ತನಿಖಾ ಸಂಸ್ಥೆಗೆ ದೋಷಾರೋಪಣೆ ಸಲ್ಲಿಸಲು ಯಾವುದೇ ಅಡೆತಡೆ ಉಳಿದಿಲ್ಲ. ಈ ಆದೇಶದಿಂದ ರೇವಣ್ಣ ಅವರಿಗೆ ಕಾನೂನು ಮಟ್ಟದಲ್ಲಿ ಮತ್ತೊಂದು ದೊಡ್ಡ ಸಂಕಷ್ಟ ಎದುರಾಗಿದ್ದು, ಪ್ರಕರಣ ಮತ್ತಷ್ಟು ಗಂಭೀರ ಹಂತಕ್ಕೆ ತಲುಪಿದೆ.
