Ashwaveega News 24×7 ಫೆಬ್ರವರಿ 06 -2026 : ಧರ್ಮಸ್ಥಳದ “ಬುರುಡೆ” ಪ್ರಕರಣದಲ್ಲಿ ಮಹತ್ವದ ತಿರುವು ಕಂಡುಬಂದಿದ್ದು, ಈ ವರೆಗೆ ಬುರುಡೆ ಗ್ಯಾಂಗ್ ಪರ ನಿಲುವು ತಾಳಿದ್ದ ‘ಮಾಸ್ಕ್ಮ್ಯಾನ್’ ಚಿನ್ನಯ್ಯ ಇದೀಗ ಧರ್ಮಸ್ಥಳ ಕ್ಷೇತ್ರದ ಪರವಾಗಿ ಬ್ಯಾಟ್ ಬೀಸಿದ್ದಾರೆ.
ಪ್ರಕರಣದ ವಿಚಾರಣೆಯ ವೇಳೆ, ಬುರುಡೆ ಕೇಸಲ್ಲಿ ಧರ್ಮಸ್ಥಳದವರ ಎಂಟ್ರಿಗೆ ಯಾವುದೇ ಆಕ್ಷೇಪವಿಲ್ಲ ಎಂದು ಚಿನ್ನಯ್ಯ ನ್ಯಾಯಾಲಯಕ್ಕೆ ಸ್ಪಷ್ಟಪಡಿಸಿದ್ದಾರೆ. “ಈ ಪ್ರಕರಣದಲ್ಲಿ ಧರ್ಮಸ್ಥಳದವರು ಭಾಗಿಯಾಗುವುದಕ್ಕೆ ನನಗೆ ವಿರೋಧ ಇಲ್ಲ” ಎಂದು ಅವರು ತಿಳಿಸಿದ್ದಾರೆ.
ಇದೇ ವೇಳೆ, ಧರ್ಮಸ್ಥಳ ಪರ ವಕೀಲರು ನ್ಯಾಯಾಲಯದಲ್ಲಿ ಮನವಿ ಸಲ್ಲಿಸಿ, “ಈ ಪ್ರಕರಣದಲ್ಲಿ ಧರ್ಮಸ್ಥಳವನ್ನು ‘ಸಂತ್ರಸ್ತ’ ಎಂದು ಪರಿಗಣಿಸಿ, ಕೇಸಿನಲ್ಲಿ ಭಾಗಿಯಾಗಲು ಅವಕಾಶ ನೀಡಬೇಕು” ಎಂದು ಕೋರಿದ್ದಾರೆ. ನ್ಯಾಯಾಂಗ ಪ್ರಕ್ರಿಯೆಯಲ್ಲಿ ತಮ್ಮ ಭಾಗವಹಿಸುವಿಕೆ ಅಗತ್ಯ ಎಂದು ವಾದ ಮಂಡಿಸಲಾಗಿದೆ.
ಆದರೆ, ಧರ್ಮಸ್ಥಳದ ಮನವಿಗೆ ತಿಮರೋಡಿ ಗ್ಯಾಂಗ್ ವಿರೋಧ ವ್ಯಕ್ತಪಡಿಸಿದೆ. ಮಹೇಶ್ ಶೆಟ್ಟಿ ಹಾಗೂ ಇತರ ಆರೋಪಿತರ ಪರ ವಕೀಲರು, ಧರ್ಮಸ್ಥಳದವರ ಎಂಟ್ರಿಗೆ ಸಂಬಂಧಿಸಿದಂತೆ ಲಿಖಿತ ಆಕ್ಷೇಪಣೆಗಳನ್ನು ಸಲ್ಲಿಸಿದ್ದಾರೆ.
ಈ ನಡುವೆ, ಚಿನ್ನಯ್ಯ ಅವರು ಮತ್ತೊಮ್ಮೆ ನ್ಯಾಯಾಲಯದ ಮುಂದೆ ತಮ್ಮಿಂದ ಯಾವುದೇ ಆಕ್ಷೇಪಣೆ ಇಲ್ಲ ಎಂದು ಸ್ಪಷ್ಟಪಡಿಸಿದ್ದು, ಧರ್ಮಸ್ಥಳದವರ ಕೇಸ್ ಎಂಟ್ರಿಗೆ ಓಕೆ ಎಂದಿರುವುದು ಪ್ರಕರಣಕ್ಕೆ ಹೊಸ ಆಯಾಮ ಪಡೆದಿದೆ .
ಎರಡು ಪಾಳಯಗಳವಾದ – ಪ್ರತಿವಾದಗಳನ್ನು ಆಲಿಸಿದ ಬೆಳ್ತಂಗಡಿ ನ್ಯಾಯಾಲಯ ವಿಚಾರಣೆಯನ್ನು ಮುಂದೂಡಿದ್ದು, ಮುಂದಿನ ದಿನಾಂಕವನ್ನು ನಿಗದಿಪಡಿಸಿದೆ. ಧರ್ಮಸ್ಥಳ “ಬುರುಡೆ” ಪ್ರಕರಣದಲ್ಲಿ ನಡೆದ ಈ ಬೆಳವಣಿಗೆ, ಪ್ರಕರಣದ ದಿಕ್ಕನ್ನೇ ಬದಲಾಯಿಸ ಬಹುದಾದ ಪ್ರಮುಖ ಟ್ವಿಸ್ಟ್ ಎಂದು ಕಾನೂನು ವಲಯದಲ್ಲಿ ಚರ್ಚೆಯಾಗುತ್ತಿದೆ.
