DCIM\100MEDIA\DJI_0050.JPG
Ashwaveega News 24×7 ಫೆಬ್ರವರಿ 08 -2026 – ಬೆಂಗಳೂರು : ಎತ್ತಿನಹೊಳೆ ಯೋಜನೆಯ ಅನುಷ್ಠಾನದಲ್ಲಿ ಅಕ್ರಮಗಳು ಹಾಗೂ ವಿಳಂಬದ ಬಗ್ಗೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ (HDK) ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ವಿರುದ್ಧ ಕಠಿಣ ಪ್ರಶ್ನೆಗಳನ್ನು ಎಸೆದ ಅವರು, ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳ ಜನರೊಂದಿಗೆ ಅನ್ಯಾಯವಾಗುತ್ತಿದೆ ಎಂದು ಆರೋಪಿಸಿದ್ದಾರೆ.
“ಐದು ವರ್ಷಗಳಲ್ಲಿ ನೀರು ಕೊಡುತ್ತೇವೆ ಎಂದು ಹೇಳಿದ್ದರು. ಈಗ ಹತ್ತು ವರ್ಷ ಕಳೆದರೂ ನೀರು ಬಂದಿಲ್ಲ. ನಾನು ಅವತ್ತೇ ನೀರು ಕೊಡದಿದ್ದರೆ ತಲೆಬೋಳಿಸಿಕೊಳ್ಳುತ್ತೇನೆ ಎಂದು ಸವಾಲು ಹಾಕಿದ್ದೆ. ಆಗ ಅವರು ನನ್ನ ತಲೆಯಲ್ಲಿ ಕೂದಲು ಇಲ್ಲ ಎಂದು ಲೇವಡಿ ಮಾಡಿದರು,” ಎಂದು ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಇದೀಗ 2027ಕ್ಕೆ ಎತ್ತಿನಹೊಳೆ ನೀರು ನೀಡುತ್ತೇವೆ ಎಂದು ಸರ್ಕಾರ ಹೇಳುತ್ತಿರುವುದನ್ನು ಉಲ್ಲೇಖಿಸಿದ ಅವರು, “ಈಗಾಗಲೇ ಸುಮಾರು 2900 ಕೋಟಿ ರೂ. ವೆಚ್ಚದಲ್ಲಿ ಖರೀದಿಸಿದ ಮೋಟರ್ಗಳು ಉಪಯೋಗವಿಲ್ಲದೇ ತುಕ್ಕು ಹಿಡಿಯುತ್ತಿವೆ. ಇದಕ್ಕೆ ಯಾರು ಹೊಣೆ?” ಎಂದು ಪ್ರಶ್ನಿಸಿದ್ದಾರೆ.
ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ನೀರು ಪೂರೈಕೆ ಮಾಡಲು ಇನ್ನಷ್ಟು ಎಷ್ಟು ವರ್ಷ ಬೇಕು ಎಂದು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ HDK, “ಕೋಲಾರ ಜಿಲ್ಲೆಯ ಜನರೊಂದಿಗೆ ಚೆಲ್ಲಾಟ ಆಡಲಾಗುತ್ತಿದೆಯೇ?” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಎತ್ತಿನಹೊಳೆ ಯೋಜನೆ ರಾಜ್ಯದ ಪ್ರಮುಖ ಕುಡಿಯುವ ನೀರಿನ ಯೋಜನೆಯಾಗಿದ್ದರೂ, ನಿರಂತರ ವಿಳಂಬ ಮತ್ತು ವೆಚ್ಚ ವೃದ್ಧಿಯಿಂದ ಜನರಲ್ಲಿ ನಿರಾಸೆ ಮೂಡಿದೆ. ಈ ಕುರಿತು ರಾಜ್ಯ ಸರ್ಕಾರದಿಂದ ಇನ್ನೂ ಸ್ಪಷ್ಟ ಉತ್ತರ ಲಭ್ಯವಾಗಿಲ್ಲ.
