Ashwaveega News 24×7 ಫೆಬ್ರವರಿ 08 -2026 – ಬೆಂಗಳೂರು : ಸಿದ್ದಾಪುರ ಕೊಲೆ ಪ್ರಕರಣದಲ್ಲಿ ಬಂಧಿತನಾಗಿರುವ ಜ್ಯೋತಿಷಿ ಕಮಲಾಕರ್ ಭಟ್ ಕುರಿತು ಪೊಲೀಸರ ತನಿಖೆಯಲ್ಲಿ ಅಚ್ಚರಿಯ ಮಾಹಿತಿ ಬಹಿರಂಗವಾಗಿದೆ. ಜ್ಯೋತಿಷಿಯಾಗಿ ಹೆಸರು ಮಾಡಿದ್ದ ಕಮಲಾಕರ್ ಭಟ್ನ ಹಿನ್ನಲೆ ಸಂಪೂರ್ಣ ವಿಭಿನ್ನವಾಗಿದ್ದು, ಅವರ ಜೀವನದ ಹಲವು ಮಗ್ಗುಲುಗಳನ್ನು ಪೊಲೀಸರು ಹೊರತೆಗೆದಿದ್ದಾರೆ.
ಪೊಲೀಸರ ಮಾಹಿತಿಯಂತೆ, 2005ರ ವರೆಗೆ ಕಮಲಾಕರ್ ಭಟ್ ಎಲೆ ಹಾಗೂ ಕಡ್ಲೆಪುರಿ ಮಾರಾಟ ಮಾಡುತ್ತಿದ್ದ ವ್ಯಕ್ತಿಯಾಗಿದ್ದರು. ಆ ಬಳಿಕ ಏಕಾಏಕಿ ನಾಪತ್ತೆಯಾಗಿದ್ದ ಅವರು, ಕೆಲವು ವರ್ಷಗಳ ಕಾಲ ಕೇರಳದಲ್ಲಿ ತಂಗಿದ್ದು, ಅಲ್ಲೇ ಜ್ಯೋತಿಷ್ಯ ಶಾಸ್ತ್ರ ಹಾಗೂ ವಶೀಕರಣ ವಿದ್ಯೆ ಕಲಿತಿದ್ದಾರೆ .
ನಂತರ ಬೆಂಗಳೂರಿಗೆ ಬಂದ ಕಮಲಾಕರ್ ಭಟ್, ಜ್ಯೋತಿಷಿ ಎಂಬ ವೇಷ ತೊಟ್ಟು ಜನರನ್ನು ಮೋಸಗೊಳಿಸುತ್ತಿದ್ದ ಆರೋಪ ಎದುರಿಸುತ್ತಿದ್ದಾರೆ. ಪ್ರತೀ ಜಿಲ್ಲೆಯಲ್ಲಿ ಬ್ರೋಕರ್ಗಳನ್ನು ನೇಮಿಸಿ, ಗ್ರಾಹಕರನ್ನು ಸೆಳೆಯುವ ಜಾಲವನ್ನು ನಿರ್ಮಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಅವಧಿಯಲ್ಲೇ ಸಿದ್ದಾಪುರ ಮೂಲದ ಸುಚಿತ್ರಾ ಎಂಬ ಮಹಿಳೆಯ ಪರಿಚಯ ಕಮಲಾಕರ್ ಭಟ್ಗೆ ಆಗಿದೆ. ಆರಂಭದಲ್ಲಿ ಸುಚಿತ್ರಾ ಕೂಡ ಜ್ಯೋತಿಷಿ ವ್ಯವಹಾರಕ್ಕೆ ಬ್ರೋಕರ್ ಆಗಿ ಕೆಲಸ ಮಾಡುತ್ತಿದ್ದಳು ಎಂದು ತನಿಖೆಯಲ್ಲಿ ತಿಳಿದುಬಂದಿದೆ. ಬಳಿಕ ಇಬ್ಬರ ನಡುವೆ ಆತ್ಮೀಯತೆ ಬೆಳೆದು ಪ್ರೇಮ ಸಂಬಂಧಕ್ಕೆ ತಿರುಗಿದೆ ಎನ್ನಲಾಗಿದೆ.
ಪೊಲೀಸರ ಪ್ರಕಾರ, ಕಮಲಾಕರ್ ಭಟ್ ಸುಚಿತ್ರಾಳನ್ನು ಮದುವೆಯಾಗಲು ನಿರ್ಧರಿಸಿದ್ದ ಅಂತೆ , ಈ ಸಂಬಂಧವೇ ನಂತರದ ಬೆಳವಣಿಗೆಗಳಿಗೆ ಕಾರಣವಾಗಿರಬಹುದು ಎಂಬ ಅನುಮಾನ ವ್ಯಕ್ತಪಡಿಸಲಾಗಿದೆ. ‘ಖತರ್ನಾಕ್ ಸುಚಿತ್ರಾ’ ಎಂಬ ಹೆಸರಿನಲ್ಲಿ ಗುರುತಿಸಲಾಗುತ್ತಿರುವ ಆಕೆಯ ಪಾತ್ರವನ್ನೂ ಪೊಲೀಸರು ಗಂಭೀರವಾಗಿ ಪರಿಶೀಲಿಸುತ್ತಿದ್ದಾರೆ.
ಸಿದ್ದಾಪುರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಮುಂದುವರಿದಿದ್ದು, ಕಮಲಾಕರ್ ಭಟ್ ಹಾಗೂ ಸುಚಿತ್ರಾ ಕುರಿತು ಇನ್ನಷ್ಟು ಮಾಹಿತಿ ಮುಂದಿನ ದಿನಗಳಲ್ಲಿ ಹೊರಬೀಳುವ ಸಾಧ್ಯತೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.
