Ashwaveega News 24×7 ಫೆಬ್ರವರಿ 08 -2026 – ಬೆಂಗಳೂರು : ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗೆ ಅಚ್ಚರಿಯ ನಿರ್ಧಾರವೊಂದು ಎದುರಾಗಿದೆ. ಇನ್ನು ಮುಂದೆ ಯೋಜನೆಯ ಸೌಲಭ್ಯ ಪಡೆಯಲು ಜೀವಿತ ಪ್ರಮಾಣ ಪತ್ರ ಸಲ್ಲಿಸುವುದು ಕಡ್ಡಾಯ ಎಂಬ ಮಾಹಿತಿ ಹೊರಬಿದ್ದಿದ್ದು, ಗೃಹಲಕ್ಷ್ಮಿಯರಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ.
“ಇದೆಂತಾ ಕರ್ಮ ರೀ… ನಾವು ಬದುಕಿದ್ದೀವಿ ಅಂತ ತೋರಿಸಬೇಕಾ?” ಎಂದು ಅನೇಕ ಮಹಿಳೆಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಸರ್ಕಾರದ ಈ ಕ್ರಮ ವಯೋವೃದ್ಧರು ಹಾಗೂ ಗ್ರಾಮೀಣ ಮಹಿಳೆಯರಿಗೆ ಮತ್ತಷ್ಟು ತೊಂದರೆ ಉಂಟುಮಾಡಲಿದೆ ಎಂಬ ಆತಂಕವೂ ವ್ಯಕ್ತವಾಗಿದೆ.
ಸರ್ಕಾರದ ಖಜಾನೆ ಮೇಲೆ ಆರ್ಥಿಕ ಒತ್ತಡ ಹೆಚ್ಚಾಗುತ್ತಿದ್ದಂತೆಯೇ ಈ ರೀತಿಯ ನಿಯಮಗಳನ್ನು ತರಲಾಗುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿವೆ. ಖಜಾನೆ ಭದ್ರಗೊಳಿಸಲು ರಾಜ್ಯ ಸರ್ಕಾರ ಸರ್ಕಸ್ ಮಾಡುತ್ತಿದೆ ಎಂಬ ಟೀಕೆಗಳು ಸಾರ್ವಜನಿಕ ವಲಯದಲ್ಲಿ ವ್ಯಾಪಕವಾಗಿವೆ.
ಸರ್ಕಾರದ ದಾಖಲೆಗಳ ಪ್ರಕಾರ, ಮರಣ ಹೊಂದಿರುವವರ ಹೆಸರಿನಲ್ಲಿ ಹಣ ದುರ್ಬಳಕೆ ಆಗುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದ್ದು, ಇದನ್ನು ತಡೆಯುವ ಉದ್ದೇಶದಿಂದಲೇ ಜೀವಿತ ಪ್ರಮಾಣ ಪತ್ರ ಕಡ್ಡಾಯಗೊಳಿಸುವ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ.
ವಿಷಯ ವಿವಾದಕ್ಕೆ ಕಾರಣವಾಗುತ್ತಿದ್ದಂತೆಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಕ್ಷಣ ಪರಿಶೀಲನೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಫಲಾನುಭವಿಗಳಿಗೆ ಅನಗತ್ಯ ತೊಂದರೆ ಆಗದಂತೆ ಕ್ರಮ ಜರುಗಿಸಬೇಕೆಂದು ಸೂಚಿಸಲಾಗಿದೆ.
