Ashwaveega News 24×7 ಫೆಬ್ರವರಿ 08 -2026 – ಮೈಸೂರು: ಸಾಲ ಮಾಡಿ ತೀರಿಸಲು “ಕೈ” ಸರ್ಕಾರದ ಬಳಿ ಹಣವಿಲ್ಲ. ಆದ್ದರಿಂದಲೇ ಜನರ ಮೇಲೆ ದರ ಏರಿಕೆಯ ಭಾರ ಹಾಕಲಾಗಿದೆ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ರಾಜ್ಯ ಸರ್ಕಾರದ ವಿರುದ್ಧ ಕಟುವಾದ ಟೀಕೆ ಮಾಡಿದ್ದಾರೆ.
ಮೈಸೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಬಡ್ಡಿ ಕಟ್ಟಲು ದುಡ್ಡಿಲ್ಲದ ಸ್ಥಿತಿಯಲ್ಲಿ ರಾಜ್ಯ ಸರ್ಕಾರ ಕೇಂದ್ರದ ಮೇಲೆ ಆರೋಪಗಳ ಮಳೆ ಸುರಿಸುತ್ತಿದೆ. ಪ್ರತಿಯೊಂದು ಸಮಸ್ಯೆಗೂ ಕೇಂದ್ರ ಸರ್ಕಾರವನ್ನೇ ಹೊಣೆ ಮಾಡುವುದು ಕಾಂಗ್ರೆಸ್ ಸರ್ಕಾರದ ನಿತ್ಯದ ಅಭ್ಯಾಸವಾಗಿದೆ ಎಂದು ಕಿಡಿಕಾರಿದರು.
ರಾಜ್ಯ ಸರ್ಕಾರ ಕೇಂದ್ರದೊಂದಿಗೆ ಒಳ್ಳೆಯ ಸಂಬಂಧ ಇಟ್ಟುಕೊಂಡು, ರಾಜ್ಯಕ್ಕೆ ಬೇಕಾದ ಕೊಡುಗೆಗಳನ್ನು ಪಡೆದುಕೊಳ್ಳಬೇಕಿತ್ತು. ಆದರೆ, ಸಂಘರ್ಷದ ರಾಜಕೀಯದಿಂದಾಗಿ ರಾಜ್ಯಕ್ಕೆ ಬರಬೇಕಾದ ಅನುದಾನಗಳನ್ನೇ ಕಳೆದುಕೊಳ್ಳುತ್ತಿದೆ ಎಂದು ಕುಮಾರಸ್ವಾಮಿ ಆರೋಪಿಸಿದರು.
ಮಾವು ಬೆಲೆ ಕುಸಿತಕ್ಕೂ ಕೇಂದ್ರ ಸರ್ಕಾರವೇ ಕಾರಣ ಎಂದು ಹೇಳುತ್ತಿರುವುದು ಸಂಪೂರ್ಣ ತಪ್ಪು. ಮಾರುಕಟ್ಟೆಯ ವೈಫಲ್ಯ, ಆಡಳಿತದ ನಿರ್ಲಕ್ಷ್ಯ ಮರೆಮಾಚಲು ಕೇಂದ್ರದ ಮೇಲೆ ಆರೋಪ ಮಾಡುವುದೇ ಕಾಂಗ್ರೆಸ್ ಸರ್ಕಾರದ ಧೋರಣೆಯಾಗಿದೆ ಎಂದು ಹೇಳಿದರು.
ಕೇಂದ್ರದೊಂದಿಗೆ ರಾಜ್ಯ ಸರ್ಕಾರಕ್ಕೆ ಯಾವುದೇ ವಿಶ್ವಾಸವಿಲ್ಲ. ಅದಷ್ಟೇ ಅಲ್ಲ, ರಾಜ್ಯದ ಮಂತ್ರಿಗಳಲ್ಲಿಯೇ ಒಬ್ಬರಿಗೊಬ್ಬರಿಗೆ ವಿಶ್ವಾಸವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಇದೇ ಆಡಳಿತದ ಅಸ್ಥಿರತೆಗೆ ಕಾರಣ ಎಂದು ಅವರು ವಿಶ್ಲೇಷಿಸಿದರು.
ರಾಜ್ಯ ಸರ್ಕಾರ ಜನರ ಸಮಸ್ಯೆಗಳಿಗೆ ಪರಿಹಾರ ನೀಡುವ ಬದಲು, ರಾಜಕೀಯ ಆರೋಪಗಳಲ್ಲೇ ಕಾಲ ಕಳೆಯುತ್ತಿದೆ. ಇದರ ಪರಿಣಾಮ ರಾಜ್ಯದ ಅಭಿವೃದ್ಧಿ ಸಂಪೂರ್ಣವಾಗಿ ಹಿಂದುಳಿಯುತ್ತಿದೆ ಎಂದು ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.
