Ashwaveega News 24×7 ಫೆಬ್ರವರಿ 09 -2026 – ಬೆಂಗಳೂರು : ಪದವಿಪೂರ್ವ, ಉಡಾಳ ಖ್ಯಾತಿಯ ನಟ ಪೃಥ್ವಿ ಶಾಮನೂರು ಮತ್ತೊಂದು ಯೂಥ್ಫುಲ್ ಲವ್ ಸ್ಟೋರಿಯ ಮೂಲಕ ಬೆಳ್ಳಿತೆರೆಗೆ ಬರಲು ಸಜ್ಜಾಗಿದ್ದಾರೆ. ‘ಹೃದಯಾ’ ಎಂಬ ಹೆಸರಿನ ಈ ಚಿತ್ರಕ್ಕೆ ಇತ್ತೀಚೆಗೆ ಬೆಂಗಳೂರಿನ ಶ್ರೀ ಬಂಡೆ ಮಹಾಂಕಾಳಮ್ಮ ದೇವಸ್ಥಾನದಲ್ಲಿ ಅದ್ಧೂರಿಯಾಗಿ ಚಾಲನೆ ದೊರಕಿತು.
ದಶಕಕ್ಕೂ ಹೆಚ್ಚು ಕಾಲ ಕನ್ನಡ ಚಿತ್ರರಂಗದ ನಿರ್ದೇಶನ ವಿಭಾಗದಲ್ಲಿ ಕೆಲಸ ಮಾಡಿರುವ ರಜತ್ ಸೂರ್ಯವಂಶಿ, ಈ ಚಿತ್ರದ ಮೂಲಕ ಮೊದಲ ಬಾರಿಗೆ ನಿರ್ದೇಶಕರಾಗಿ ಮೆಟ್ಟಿಲೇರಿದ್ದಾರೆ. ಪ್ರಣಿತ್ ಪಿಕ್ಚರ್ಸ್ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಶ್ರೀದೇವಿ ಎಲ್.ಕೆ. ಅವರು ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ.
ಚಿತ್ರದ ಮುಹೂರ್ತ ಸಮಾರಂಭದಲ್ಲಿ ಪ್ರಥಮ ದೃಶ್ಯಕ್ಕೆ ನಟ ನವೀನ್ ಶಂಕರ್ ಕ್ಲಾಪ್ ಮಾಡಿ ಶುಭ ಹಾರೈಸಿದರು. ಮುಖ್ಯ ಅತಿಥಿಗಳಾಗಿ ನಿರ್ದೇಶಕ ಯೋಗರಾಜ ಭಟ್ ಹಾಗೂ ಸಾಹಿತಿ ಡಾ. ನಾಗೇಂದ್ರ ಪ್ರಸಾದ್ ಆಗಮಿಸಿ ಚಿತ್ರತಂಡಕ್ಕೆ ಶುಭ ಕೋರಿದರು.

ನಿರ್ದೇಶಕ ರಜತ್ ಸೂರ್ಯವಂಶಿ,“ಕಳೆದ 12 ವರ್ಷಗಳಿಂದ ನಾನು ನಂದಕಿಶೋರ್ ಅವರೊಂದಿಗೆ ‘ವಿಕ್ಟರಿ’, ‘ಅಧ್ಯಕ್ಷ’ ಸೇರಿದಂತೆ ಹಲವು ಚಿತ್ರಗಳಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದೇನೆ. ಇದು ನನ್ನ ನಿರ್ದೇಶನದ ಮೊದಲ ಚಿತ್ರ. ‘ಹೃದಯಾ’ ಒಂದು ಫೀಲ್ ಗುಡ್ ಲವ್ ಸ್ಟೋರಿ. ನೈಜ ಘಟನೆಯೊಂದನ್ನು ಆಧರಿಸಿ 2000–2006 ರ ಅವಧಿಯಲ್ಲಿ ನಡೆಯುವ ಕಾಲೇಜು ಪ್ರೇಮ ಕಥೆಯನ್ನು ಈ ಚಿತ್ರದ ಮೂಲಕ ಹೇಳುತ್ತಿದ್ದೇವೆ. ಆ ಕಾಲದಲ್ಲಿ 22–23 ವರ್ಷದ ಕಾಲೇಜು ವಿದ್ಯಾರ್ಥಿಗಳ ನಡುವೆ ಪ್ರೀತಿ ಹೇಗಿರುತ್ತಿತ್ತು ಎಂಬುದನ್ನು ತೆರೆಮೇಲೆ ತೋರಿಸುತ್ತೇವೆ”
ಮಾರ್ಚ್ ಮೊದಲ ವಾರದಿಂದ ಬೆಂಗಳೂರು, ಮೈಸೂರು, ಮಂಗಳೂರು, ಮಡಿಕೇರಿ ಹಾಗೂ ಕೇರಳದಲ್ಲಿ ಚಿತ್ರೀಕರಣ ನಡೆಯಲಿದ್ದು, ಚಿತ್ರದಲ್ಲಿ ಐದು ಹಾಡುಗಳಿವೆ. ಸಂಗೀತವನ್ನು ಚೇತನ್ ದಾವ್ಯ ನೀಡುತ್ತಿದ್ದಾರೆ . ನಾಯಕಿಯಾಗಿ ಆರಾಧನಾ ಭಟ್, ನಾಯಕಿಯ ತಂದೆಯಾಗಿ ರಮೇಶ್ ಇಂದಿರಾ, ನಾಯಕನ ತಂದೆ–ತಾಯಿಯಾಗಿ ರವಿಭಟ್ ಮತ್ತು ಸ್ವಾತಿ, ಸ್ನೇಹಿತನ ಪಾತ್ರದಲ್ಲಿ ಸೂರಜ್ ನಟಿಸುತ್ತಿದ್ದಾರೆ

ನಾಯಕನಟ ಪೃಥ್ವಿ ಶಾಮನೂರು ಮಾತನಾಡಿ, “ಪದವಿ ಪೂರ್ವದಿಂದ ಆರಂಭಿಸಿ ಇದು ನಾನು ನಟಿಸುತ್ತಿರುವ ನಾಲ್ಕನೇ ಚಿತ್ರ. ಇದು 2006ರಲ್ಲಿ ನಡೆಯುವ ಅಪ್ಪಟ ಪ್ರೇಮಕಥೆ. ಕಥೆ ತುಂಬಾ ಇಷ್ಟವಾಯ್ತು. ಒಬ್ಬ ಕಾಲೇಜು ಹುಡುಗನ ಪಾತ್ರದಲ್ಲಿ ನಟಿಸುತ್ತಿದ್ದೇನೆ” ಎಂದರು.
ನಾಯಕಿ ಆರಾಧನಾ ಭಟ್ ಮಾತನಾಡಿ, “ಕಿರುತೆರೆಯ ‘ಮಹಾನಟಿ’ಯಲ್ಲಿ ಭಾಗವಹಿಸಿದ್ದೇನೆ. ಇದು ನನ್ನ ಎರಡನೇ ಸಿನಿಮಾ. ಕಥೆ ಕೇಳಿ ತುಂಬಾ ಖುಷಿಯಾಯ್ತು. ನನ್ನದು ಕಾಲೇಜು ಹುಡುಗಿಯ ಪಾತ್ರ, ಮೂರು ಶೇಡ್ಸ್ ಇರುವ ಪಾತ್ರ” ಎಂದು ಹೇಳಿದರು.

ಚಿತ್ರದ ನಿರ್ಮಾಪಕಿ ಶ್ರೀದೇವಿ ಎಲ್.ಕೆ. ಮಾತನಾಡಿ, “ನಿರ್ದೇಶಕರು ಹೇಳಿದ ಕಥೆ ತುಂಬಾ ಚೆನ್ನಾಗಿತ್ತು. ಅದಕ್ಕಾಗಿಯೇ ಈ ಚಿತ್ರವನ್ನು ನಿರ್ಮಿಸಲು ಮುಂದಾದೆವು” ಎಂದರು.
ಚಿತ್ರಕ್ಕೆ ಸಾಗರ್ ಅವರ ಛಾಯಾಗ್ರಹಣ, ರಜತ್–ಉಪೇಂದ್ರ–ಮನೋಜ್ ಅವರ ಸಂಭಾಷಣೆ, ನಾಗೇಂದ್ರ ಪ್ರಸಾದ್, ಪ್ರಮೋದ್ ಮರವಂತೆ, ಧನಂಜಯ್ ಅವರ ಸಾಹಿತ್ಯವಿದೆ.

