Ashwaveega News 24×7 ಫೆಬ್ರವರಿ 09 -2026 – ಬೆಂಗಳೂರು : ದೇಶದ ಸಂಸತ್ತಿಗೇ ಬರಲು ಧೈರ್ಯ ಇಲ್ಲದ ಪ್ರಧಾನಿ ನರೇಂದ್ರ ಮೋದಿ ಹೇಗೆ ದೇಶ ರಕ್ಷಿಸುತ್ತಾರೆ ?” ಎಂಬ ಅವಹೇಳನಕಾರಿ ಬರಹದ ಫ್ಲೆಕ್ಸ್ ಅಳವಡಿಸಿದ್ದ ಆರೋಪದ ಹಿನ್ನೆಲೆಯಲ್ಲಿ ಯೂತ್ ಕಾಂಗ್ರೆಸ್ ವಿರುದ್ಧ ಬಿಜೆಪಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.
ಈ ಸಂಬಂಧ ಬಿಜೆಪಿ ಮುಖಂಡರಾದ ಹರೀಶ್, ಸಪ್ತಗಿರಿ ಗೌಡ ಹಾಗೂ ತುಳಸಿ ಮುನಿರಾಜು ಅವರು ಬೆಂಗಳೂರು ಕೇಂದ್ರ ವಿಭಾಗದ ಡಿಸಿಪಿಗೆ ಅಧಿಕೃತ ದೂರು ಸಲ್ಲಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಅವಹೇಳನಕಾರಿ ಪೋಸ್ಟರ್ ಮತ್ತು ಫ್ಲೆಕ್ಸ್ಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಅಳವಡಿಸಲಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಇಂತಹ ಕೃತ್ಯಗಳು ಪ್ರಧಾನಮಂತ್ರಿ ಹುದ್ದೆಗೆ ಅವಮಾನವಾಗಿದ್ದು, ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಬಿಜೆಪಿ ಮುಖಂಡರು ಒತ್ತಾಯಿಸಿದ್ದಾರೆ.
ಫ್ಲೆಕ್ಸ್ ಅಳವಡಿಸಿದ್ದವರನ್ನು ತಕ್ಷಣ ಬಂಧಿಸಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಕೇಸರಿ ಪಡೆ ಆಗ್ರಹಿಸಿದ್ದು, ಈ ಮೂಲಕ ರಾಜಕೀಯ ವಾಗ್ವಾದ ಮತ್ತಷ್ಟು ತೀವ್ರಗೊಂಡಿದೆ. ಯೂತ್ ಕಾಂಗ್ರೆಸ್ ನಡೆಸಿದ ಈ ಕ್ರಮ ಪ್ರಜಾಪ್ರಭುತ್ವದ ಮೌಲ್ಯಗಳಿಗೆ ವಿರುದ್ಧವಾಗಿದೆ ಎಂದು ಬಿಜೆಪಿ ಆರೋಪಿಸಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಪರಿಶೀಲನೆ ಆರಂಭಿಸಿದ್ದಾರೆ.
ಪ್ರಧಾನಿ ವಿರುದ್ಧದ ಪೋಸ್ಟರ್ ವಿವಾದ ಇದೀಗ ರಾಜ್ಯ ರಾಜಕೀಯದಲ್ಲಿ ಮತ್ತೊಂದು ಹೊಸ ಸಂಘರ್ಷಕ್ಕೆ ಕಾರಣವಾಗಿದ್ದು, ಮುಂದಿನ ದಿನಗಳಲ್ಲಿ ರಾಜಕೀಯ ತಾಪಮಾನ ಇನ್ನಷ್ಟು ಏರುವ ಸಾಧ್ಯತೆ ಇದೆ.
