Ashwaveega News 24×7 ಫೆಬ್ರವರಿ 10 -2026 – ಹುಬ್ಬಳ್ಳಿ : ಉತ್ತರ ಕರ್ನಾಟಕದ ಸೊಗಡನ್ನು ತೆರೆಮೇಲೆ ತರುವ ಉದ್ದೇಶ ಹೊಂದಿರುವ ‘ಹುಬ್ಬಳ್ಳಿ ಹಂಟರ್ಸ್’ ಚಿತ್ರದ ಮೊದಲ ಹಂತದ ಚಿತ್ರೀಕರಣ ಯಶಸ್ವಿಯಾಗಿ ಮುಕ್ತಾಯಗೊಂಡಿದೆ. ಕನ್ನಡದ ಸೂಪರ್ ಹಿಟ್ ಸಿನಿಮಾ ಬೆಲ್ ಬಾಟಮ್ ನಿರ್ಮಾಪಕ ಸಂತೋಷ್ ಕುಮಾರ್ ಕೆಸಿ, ತಮ್ಮದೇ ಗೋಲ್ಡನ್ ಹಾರ್ಸ್ ಸಿನಿಮಾ ಬ್ಯಾನರ್ ಅಡಿಯಲ್ಲಿ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.
ಈ ಹಿಂದೆ ಎಡಗೈ ಅಪಘಾತಕ್ಕೆ ಕಾರಣ ಚಿತ್ರದ ಮೂಲಕ ಗಮನ ಸೆಳೆದಿದ್ದ ಸಮರ್ಥ್ ಬಿ. ಕಡ್ಕೋಲ್ ‘ಹುಬ್ಬಳ್ಳಿ ಹಂಟರ್ಸ್’ ಚಿತ್ರದ ನಿರ್ದೇಶನ ಮಾಡುತ್ತಿದ್ದಾರೆ. ಹುಬ್ಬಳ್ಳಿಯಲ್ಲಿ ಮುಹೂರ್ತ ನೆರವೇರಿಸಿದ್ದ ಚಿತ್ರತಂಡ, ನಗರದಲ್ಲಿಯೇ 14 ದಿನಗಳ ಕಾಲ ಮೊದಲ ಹಂತದ ಶೂಟಿಂಗ್ ನಡೆಸಿದೆ.

ಚಿತ್ರತಂಡದ ಮಾಹಿತಿ ಪ್ರಕಾರ, ಮಾರ್ಚ್ ತಿಂಗಳಲ್ಲಿ ಚಿತ್ರದ ಎರಡನೇ ಹಂತದ ಚಿತ್ರೀಕರಣ ಆರಂಭಿಸುವ ಯೋಜನೆ ರೂಪಿಸಲಾಗಿದೆ. ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ನಟ ಪ್ರಮೋದ್ ಶೆಟ್ಟಿ ಹಾಗೂ ಮಹಾನಟಿ ಖ್ಯಾತಿಯ ಧನ್ಯಶ್ರೀ ಸುಜಿತ್ ಚಿತ್ರದ ಮುಖ್ಯಭೂಮಿಕೆಯಲ್ಲಿ ಅಭಿನಯಿಸುತ್ತಿದ್ದಾರೆ. ಇದಲ್ಲದೆ, ಭಾರತದ ವಿವಿಧ ಭಾಗಗಳ ಖ್ಯಾತ ಕಂಟೆಂಟ್ ಕ್ರಿಯೇಟರ್ಸ್ ಈ ಸಿನಿಮಾದಲ್ಲಿ ನಟಿಸುತ್ತಿರುವುದು ಚಿತ್ರದ ವಿಶೇಷ ಆಕರ್ಷಣೆಯಾಗಿದೆ.
‘ಹುಬ್ಬಳ್ಳಿ ಹಂಟರ್ಸ್’ ಎಂಬ ಶೀರ್ಷಿಕೆಯಂತೆ, ಈ ಚಿತ್ರವು ಉತ್ತರ ಕರ್ನಾಟಕದ ಸಾಂಸ್ಕೃತಿಕ ಸೊಗಡು, ಜೀವನ ಶೈಲಿ ಹಾಗೂ ನೆಲಮಟ್ಟದ ಕಥೆಯನ್ನು ಆಧರಿಸಿದೆ. ಸಮರ್ಥ್ ಬಿ. ಕಡ್ಕೋಲ್ ಕಥೆ ಬರೆದಿದ್ದು, ರಾಹುಲ್ ವಿ. ಪಾರ್ವತಿಕರ್, ಅಮಿತ್ ಕಾರ್ವ್ಕರ್ ಮತ್ತು ಚೇತನ್ ಮರಂಬೀದ್ ಅವರೊಂದಿಗೆ ಸಂಭಾಷಣೆಯ ಜವಾಬ್ದಾರಿಯನ್ನು ನಿಭಾಯಿಸಿದ್ದಾರೆ.

ಚಿತ್ರಕ್ಕೆ ಅಭಿಮನ್ಯು ಸದಾನಂದನ್ ಛಾಯಾಗ್ರಹಣ, ಪ್ರಸನ್ನ ಕೇಶವ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ಉತ್ತರ ಕರ್ನಾಟಕದ ಮಣ್ಣಿನ ವಾಸನೆ ಹೊಂದಿರುವ ಈ ಸಿನಿಮಾ ಬಗ್ಗೆ ಈಗಾಗಲೇ ಚಿತ್ರಪ್ರೇಮಿಗಳಲ್ಲಿ ಕುತೂಹಲ ಮೂಡಿದ್ದು, ಮುಂದಿನ ಹಂತದ ಚಿತ್ರೀಕರಣಕ್ಕೆ ಚಿತ್ರತಂಡ ಸಜ್ಜಾಗಿದೆ.
