Ashwaveega News 24×7 ಫೆಬ್ರವರಿ 10 -2026 – ಬೆಂಗಳೂರು : ಬೆನಕ ಟಾಕೀಸ್ ಲಾಂಛನದಲ್ಲಿ ಮುದೇಗೌಡ ನವೀನ್ ಕುಮಾರ್ ಆರ್.ಓ. ತೆಲಿಗಿ ಮಲ್ಲಿಕಾರ್ಜುನಪ್ಪ, ನಾಗರಾಜ್ ಶಂಕರ್ ಹಾಗೂ ಆಶಿತ್ ಸುಬ್ರಹ್ಮಣ್ಯ ನಿರ್ಮಿಸಿರುವ, ನಾಗರಾಜ್ ಶಂಕರ್ ನಿರ್ದೇಶನದ “ಮರಳಿ ಮನಸಾಗಿದೆ” ಚಿತ್ರದ ಟ್ರೇಲರ್ ಇತ್ತೀಚಿಗೆ ಬಿಡುಗಡೆಯಾಗಿದೆ. ಟ್ರೇಲರ್ ಬಿಡುಗಡೆಯಾಗುತ್ತಿದ್ದಂತೆಯೇ ಚಿತ್ರವು ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿದೆ. ಈ ಚಿತ್ರ ಫೆಬ್ರವರಿ 12ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ .
ಚಿತ್ರ ಬಿಡುಗಡೆಗೂ ಮುನ್ನ ಬೆಂಗಳೂರು ಸೇರಿದಂತೆ ಪುತ್ತೂರು, ಉಡುಪಿ ಮತ್ತಿತರ ಕಡೆಗಳಲ್ಲಿ ಪೇಡ್ ಪ್ರಿಮಿಯರ್ ಶೋಗಳನ್ನು ಆಯೋಜಿಸಲಾಗಿತ್ತು. ಟ್ರೇಲರ್ ಬಿಡುಗಡೆ ಸಂದರ್ಭದಲ್ಲಿ ಮಾತನಾಡಿದ ನಾಯಕ ಅರ್ಜುನ್ ವೇದಾಂತ್, “ನಾನು ನಟಿಸಿದ್ದ ‘ಕುಡ್ಲ ಕೆಫೆ’ ಚಿತ್ರ 2016ರ ಫೆಬ್ರವರಿ 12ರಂದು ಬಿಡುಗಡೆಯಾಗಿತ್ತು. ಅದೇ ದಿನಾಂಕಕ್ಕೆ ಹತ್ತು ವರ್ಷಗಳ ನಂತರ ನನ್ನ ಅಭಿನಯದ ‘ಮರಳಿ ಮನಸಾಗಿದೆ’ ಚಿತ್ರ ತೆರೆಗೆ ಬರುತ್ತಿರುವುದು ವಿಶೇಷ.

ನಿರ್ಮಾಪಕ ಮುದೇಗೌಡ ನವೀನ್ ಕುಮಾರ್ ಆರ್.ಓ., “ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ನನ್ನ ಸಿನಿಪಯಣಕ್ಕೆ ಸ್ಪೂರ್ತಿ. ಸಾಮಾನ್ಯವಾಗಿ ಟ್ರೇಲರ್ ಬಳಿಕ ಪ್ರಿಮಿಯರ್ ಇರುತ್ತದೆ. ಆದರೆ ನಾವು ಮೊದಲೇ ಪೇಡ್ ಪ್ರಿಮಿಯರ್ ನಡೆಸಿ, ನಂತರ ಟ್ರೇಲರ್ ಬಿಡುಗಡೆ ಮಾಡಿದ್ದೇವೆ. ಚಿತ್ರತಂಡದ ಒಗ್ಗಟ್ಟಿನಿಂದ ಒಳ್ಳೆಯ ಸಿನಿಮಾ ಸಿದ್ಧವಾಗಿದೆ. ಫೆಬ್ರವರಿ 12ರಂದು ಚಿತ್ರಮಂದಿರಗಳಲ್ಲಿ ಚಿತ್ರವನ್ನು ನೋಡಿ ಪ್ರೋತ್ಸಾಹಿಸಿ” ಎಂದು ಮನವಿ ಮಾಡಿದರು.
ನಿರ್ದೇಶಕ ನಾಗರಾಜ್ ಶಂಕರ್ ಮಾತನಾಡಿ, “‘ಮರಳಿ ಮನಸಾಗಿದೆ’ ನನ್ನ ಸಿನಿಪಯಣದ ಮೊದಲ ಚಿತ್ರ. ಮೂಲತಃ ನಾನು ಎಂಜಿನಿಯರ್. ಎಂಟು ಕಡೆ ಪೇಡ್ ಪ್ರಿಮಿಯರ್ ನಡೆದಿದ್ದು, ಸಾವಿರಕ್ಕೂ ಹೆಚ್ಚು ಮಂದಿ ಚಿತ್ರ ವೀಕ್ಷಿಸಿದ್ದಾರೆ. ಎಲ್ಲರೂ ಚಿತ್ರದ ಕಂಟೆಂಟ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದು ಸಾಮಾನ್ಯ ಪ್ರೇಮಕಥೆಯಲ್ಲ; ಉತ್ತಮ ವಿಷಯವಿರುವ, ಸಾಮಾನ್ಯ ಪ್ರೇಕ್ಷಕರಿಗೂ ತಲುಪುವ ಸಿನಿಮಾ” ಎಂದು ಹೇಳಿದರು.

ಚಿತ್ರದಲ್ಲಿ ನಿರೀಕ್ಷಾ ಶೆಟ್ಟಿ, ಸ್ಮೃತಿ ವೆಂಕಟೇಶ್ ನಾಯಕಿಯರಾಗಿ ನಟಿಸಿದ್ದಾರೆ. ಜೊತೆಗೆ ಗಿರೀಶ್ ಜತ್ತಿ, ಟಿ.ಎಸ್. ನಾಗಾಭರಣ, ಮಾನಸಿ ಸುಧೀರ್, ಭೋಜರಾಜ್ ವಾಮಂಜೂರ್ ಸೇರಿದಂತೆ ಹಲವರು ತಾರಾಬಳಗದಲ್ಲಿದ್ದಾರೆ. “ಮರಳಿ ಮನಸಾಗಿದೆ” ಫೆಬ್ರವರಿ 12ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.
