Ashwaveega News 24×7 ಫೆಬ್ರವರಿ 12 -2026 : ಕನ್ನಡ ಚಿತ್ರರಂಗದ ರಿಯಲ್ ಸ್ಟಾರ್ ಉಪೇಂದ್ರ ಅವರ ಪುತ್ರ ಆಯುಷ್ ಉಪೇಂದ್ರ ಇದೀಗ ಸ್ಯಾಂಡಲ್ವುಡ್ಗೆ ನಾಯಕನಾಗಿ ಪಾದಾರ್ಪಣೆ ಮಾಡುತ್ತಿದ್ದಾರೆ. ಆಯುಷ್ ಅಭಿನಯದ ಮೊದಲ ಚಿತ್ರ ಸದ್ದಿಲ್ಲದೆ ಪ್ರಾರಂಭವಾಗಿದ್ದು, ಕಾಶ್ಮೀರದಲ್ಲಿ ಮುಹೂರ್ತ ನೆರವೇರಿದ ಬಳಿಕ ಅಲ್ಲಿಯೇ 25 ದಿನಗಳ ಮೊದಲ ಹಂತದ ಚಿತ್ರೀಕರಣ ಯಶಸ್ವಿಯಾಗಿ ಪೂರ್ಣಗೊಂಡಿದೆ.
ನಾಯಕನಾಗಿ ಕಾಣಿಸಿಕೊಳ್ಳಲು ಅಗತ್ಯವಿರುವ ಪೂರ್ವ ತಯಾರಿಗಳನ್ನು ಆಯುಷ್ ಸಮರ್ಪಕವಾಗಿ ಮಾಡಿಕೊಂಡಿದ್ದಾರೆ ಎಂದು ಚಿತ್ರತಂಡ ತಿಳಿಸಿದೆ. ಈ ಮೂಲಕ ಮತ್ತೊಂದು ಹೊಸ ಪ್ರತಿಭೆ ಕನ್ನಡ ಚಿತ್ರರಂಗಕ್ಕೆ ಪ್ರವೇಶಿಸುತ್ತಿದೆ.

ರಾಕಿಂಗ್ ಸ್ಟಾರ್ ಯಶ್ ಅಭಿನಯದ “ಮೊದಲಾಸಲ” ಚಿತ್ರದ ನಿರ್ದೇಶಕರಾದ ಪುರುಷೋತ್ತಮ ಸೂರಿ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಶ್ರೀ ಕಲ್ಪವೃಕ್ಷ ಮೂವೀ ಮೇಕರ್ಸ್ ಲಾಂಛನದಲ್ಲಿ ಅಭಿಷೇಕ್ ಎನ್ ಸಿರಿವಂತ್ ಈ ಚಿತ್ರವನ್ನು ನಿರ್ಮಿಸುತ್ತಿದ್ದು, ಇದು ಅವರ ಚೊಚ್ಚಲ ನಿರ್ಮಾಣವಾಗಿದೆ.
ಖ್ಯಾತ ಛಾಯಾಗ್ರಾಹಕ ಎಚ್.ಸಿ. ವೇಣು ಅವರ ಛಾಯಾಗ್ರಹಣ ಹಾಗೂ ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯ ಅವರ ಸಂಗೀತ ಸಂಯೋಜನೆ ಚಿತ್ರಕ್ಕಿದೆ . ಚಿತ್ರದ ಶೀರ್ಷಿಕೆ ಹಾಗೂ ಉಳಿದ ತಾರಾ ಬಳಗ ಮತ್ತು ತಂತ್ರಜ್ಞರ ವಿವರಗಳನ್ನು ಶೀಘ್ರದಲ್ಲೇ ಪ್ರಕಟಿಸುವುದಾಗಿ ನಿರ್ಮಾಪಕರು ತಿಳಿಸಿದ್ದಾರೆ.

ಕಾಶ್ಮೀರದಲ್ಲಿ ನಡೆದ ಚಿತ್ರೀಕರಣದ ಸಂದರ್ಭದಲ್ಲಿ ಉಪೇಂದ್ರ ಹಾಗೂ ಪ್ರಿಯಾಂಕ ಉಪೇಂದ್ರ ಪುತ್ರನಿಗೆ ಮಾರ್ಗದರ್ಶನ ನೀಡಿದರು. ವಿಶೇಷವಾಗಿ ಪ್ರಿಯಾಂಕ ಉಪೇಂದ್ರ ಅವರು ನಿರ್ಮಾಣದ ವಿವಿಧ ಅಂಶಗಳ ಮೇಲೆ ಗಮನ ಹರಿಸಿ ಚಿತ್ರತಂಡಕ್ಕೆ ಸಹಕಾರ ನೀಡುತ್ತಿದ್ದಾರೆ.

ಆಯುಷ್ ಉಪೇಂದ್ರ ಅವರ ಮೊದಲ ಚಿತ್ರಕ್ಕೆ ಈಗಾಗಲೇ ಚಿತ್ರರಂಗದಲ್ಲಿ ಕುತೂಹಲ ಮೂಡಿದ್ದು, ಅಧಿಕೃತ ಘೋಷಣೆಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.
