Ashwaveega News 24×7 ಫೆಬ್ರವರಿ 14 -2026 – ಬೆಂಗಳೂರು: ಪೊಲೀಸ್ ಇಲಾಖೆಯ ಭ್ರಷ್ಟಾಚಾರ ಹಾಗೂ ಪ್ರಾಮಾಣಿಕತೆಯ ನಡುವಿನ ಸಂಘರ್ಷವನ್ನು ಆಧಾರವಾಗಿಟ್ಟುಕೊಂಡ “ಶೇಷ 2016” ಚಿತ್ರವು ಮಾರ್ಚ್ 06ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ನಿರ್ಮಾಣಗೊಂಡಿರುವ ಈ ಚಿತ್ರಕ್ಕೆ ಪ್ರದೀಪ್ ಅರಸೀಕೆರೆ ನಿರ್ದೇಶನ ಮಾಡಿದ್ದು, ಮರಡಿಗುಡ್ಡ ಎಂಟರ್ಟೈನ್ಮೆಂಟ್ಸ್ ಮೂಲಕ ಉಮೇಶ್ ಗೌಡ, ಮಂಜುವಾಣಿ ವಿ.ಎಸ್ ಮತ್ತು ವೀಣಾ ಎಸ್ ನಿರ್ಮಿಸಿದ್ದಾರೆ.
ಚಿತ್ರದ ಒಟಿಟಿ ಹಕ್ಕುಗಳನ್ನು Amazon Prime Video ಒಳ್ಳೆಯ ಮೊತ್ತಕ್ಕೆ ಪಡೆದುಕೊಂಡಿದೆ. ಹೈದರಾಬಾದ್ ಮೂಲದ ಡಾ. ರಾಜೀವ್ ಹಾಗೂ ಕ್ರಾಂತಿ ಪ್ರಸಾದ್ ಈ ವ್ಯವಹಾರದಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. “ಉತ್ತಮ ಗುಣಮಟ್ಟದ ಚಿತ್ರಗಳಿಗೆ ನಾವು ಸದಾ ಬೆಂಬಲ ನೀಡುತ್ತೇವೆ. ಈಗಾಗಲೇ 1880ಕ್ಕೂ ಹೆಚ್ಚು ಚಿತ್ರಗಳ ಹಕ್ಕುಗಳನ್ನು ಪಡೆದುಕೊಂಡಿದ್ದೇವೆ. ‘ಶೇಷ 2016’ ಚಿತ್ರದೊಂದಿಗೆ ಚಿತ್ರತಂಡಕ್ಕೆ ಬೆನ್ನೆಲುಬಾಗಿ ನಿಂತಿದ್ದೇವೆ,” ಎಂದು ಅವರು ತಿಳಿಸಿದ್ದಾರೆ.

ಚಿತ್ರದ ಬಿಡುಗಡೆ ದಿನಾಂಕ ಹಾಗೂ ಒಟಿಟಿ ಮಾಹಿತಿ ನೀಡಲು ಜಿಟಿ ಮಾಲ್ನ ಉತ್ಸವ ಲೆಗಸಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಪೊಲೀಸ್ ಇಲಾಖೆಯ ಎಸಿಪಿ ಗಣೇಶ್ ಹಾಗೂ ರಾಜ್ಯ ಪೊಲೀಸ್ ದೂರುಗಳ ಪ್ರಾಧಿಕಾರದ ಮುಖ್ಯಸ್ಥ ಮೋಹನ್ ಕುಮಾರ್ ದಾನಪ್ಪ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಬಿಡುಗಡೆ ದಿನಾಂಕದ ಪೋಸ್ಟರ್ ಅನಾವರಣಗೊಳಿಸಿದರು.
ಎಸಿಪಿ ಗಣೇಶ್ ಮಾತನಾಡಿ, “ಸಾಮಾನ್ಯವಾಗಿ ಸಿನಿಮಾಗಳಲ್ಲಿ ಪೊಲೀಸ್ ಪಾತ್ರಗಳನ್ನು ನೆಗೆಟಿವ್ ಆಗಿ ತೋರಿಸಲಾಗುತ್ತದೆ. ಆದರೆ ಈ ಚಿತ್ರದಲ್ಲಿ ಭ್ರಷ್ಟ ಅಧಿಕಾರಿಗಳ ಜೊತೆಗೆ ಪ್ರಾಮಾಣಿಕ ಅಧಿಕಾರಿಗಳನ್ನೂ ತೋರಿಸಲಾಗಿದೆ. ಜನರು ಮೊಬೈಲ್ನಲ್ಲಿ ನೋಡುವುದಕ್ಕಿಂತ ಚಿತ್ರಮಂದಿರಕ್ಕೆ ಬಂದು ಸಿನಿಮಾವನ್ನು ನೋಡಿ,” ಎಂದು ಹೇಳಿದರು.

ನಿರ್ದೇಶಕ ಪ್ರದೀಪ್ ಅರಸೀಕೆರೆ ಮಾತನಾಡಿ, “ಇದು ನನ್ನ ಮೊದಲ ನಿರ್ದೇಶನದ ಸಿನಿಮಾ. 2016ರ ಕಾಲಘಟ್ಟದಲ್ಲಿ ಕರ್ನಾಟಕ–ಕೇರಳ ಗಡಿಭಾಗದಲ್ಲಿ ನಡೆಯುವ ಕಾಲ್ಪನಿಕ ಘಟನೆಗಳ ಸುತ್ತ ಕಥೆ ಹೆಣೆದಿದ್ದೇವೆ. ಪೊಲೀಸ್ ಇಲಾಖೆಯಲ್ಲಿ ನಡೆಯುವ ಭ್ರಷ್ಟಾಚಾರದಿಂದ ಜನರು ಎದುರಿಸುವ ಸಂಕಷ್ಟಗಳನ್ನು ಸೂಕ್ಷ್ಮವಾಗಿ ಚಿತ್ರಿಸಿದ್ದೇವೆ. ಸುಮಾರು 35 ದಿನ ಹಗಲು–ರಾತ್ರಿ ಶೂಟಿಂಗ್ ನಡೆಸಿದ್ದೇವೆ. ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ಏಕಕಾಲದಲ್ಲಿ ಬಿಡುಗಡೆ ಮಾಡುತ್ತಿದ್ದೇವೆ,” ಎಂದು ಹೇಳಿದರು.
ಚಿತ್ರದಲ್ಲಿ ಪ್ರಮೋದ್ ಶೆಟ್ಟಿ, ಜಾನ್ ಕೈಪ್ಪಲ್ಲಿ, ಅರ್ಚನಾ ಕೊಟ್ಟಿಗೆ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಜೊತೆಗೆ ದೇವರಾಜ್ ಎಸ್.ಪಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಸಿದ್ಲಿಂಗು ಶ್ರೀಧರ್, ಸಾಯಿ ಭೈರವ ಸೇರಿದಂತೆ ಹಲವು ಕಲಾವಿದರು ನಟಿಸಿದ್ದಾರೆ.

ನಟ ಪ್ರಮೋದ್ ಶೆಟ್ಟಿ ಮಾತನಾಡಿ, “ಪೊಲೀಸ್ ಪಾತ್ರಗಳು ನನಗೆ ಹೊಸದಲ್ಲ. ಆದರೆ ಈ ಚಿತ್ರ ವಿಭಿನ್ನವಾಗಿದೆ. ಮಲಯಾಳಂ ಡಬ್ನ್ನೂ ನಾನೇ ಮಾಡಿದ್ದೇನೆ. ಸ್ಟೇಷನ್ ಸುತ್ತ ನಡೆಯುವ ಕುತೂಹಲಕಾರಿ ಕಥೆ ಇದು,” ಎಂದರು. ನಟಿ ಅರ್ಚನಾ ಕೊಟ್ಟಿಗೆ ತಮ್ಮದು ಪೊಲೀಸ್ ಪಾತ್ರವೆಂದು ಹೇಳಿ, ಚಿತ್ರದ ಬಗ್ಗೆ ಹೆಚ್ಚಿನ ಮಾಹಿತಿ ಚಿತ್ರಮಂದಿರದಲ್ಲೇ ತಿಳಿಯಲಿದೆ ಎಂದು ಹೇಳಿದರು.

ಚಿತ್ರಕ್ಕೆ ಪೂರ್ಣಚಂದ್ರ ತೇಜಸ್ವಿ ಸಂಗೀತ ಸಂಯೋಜಿಸಿದ್ದು, ಆರ್.ಎಸ್. ಆನಂದ್ ಕುಮಾರ್ ಛಾಯಾಗ್ರಹಣ ಮಾಡಿದ್ದಾರೆ. ಕರ್ನಾಟಕದ ವಿವಿಧ ಭಾಗಗಳಲ್ಲಿ ಹಾಗೂ ಕೇರಳದ ವೈನಾಡು ಪ್ರದೇಶದಲ್ಲಿ ಪ್ರಚಾರ ಕಾರ್ಯ ನಡೆಸಿ, ಮಾರ್ಚ್ 06ರಂದು ಎರಡು ಭಾಷೆಗಳಲ್ಲಿ ಅದ್ದೂರಿಯಾಗಿ ಬಿಡುಗಡೆ ಮಾಡುವ ಯೋಜನೆ ಚಿತ್ರತಂಡದಾಗಿದೆ.
‘
