Ashwaveega News 24×7 ಫೆಬ್ರವರಿ 14 -2026 – ಬೆಂಗಳೂರು: ಮಹಾಶಿವರಾತ್ರಿ ಎಂದರೆ ಭಗವಾನ್ ಶಿವನಿಗೆ ಸಮರ್ಪಿತ ಮಹತ್ವದ ಹಿಂದು ಹಬ್ಬ. ವರ್ಷಕ್ಕೆ ಒಂದು ಬಾರಿ ಬರುವ “ಶಿವನ ಮಹಾ ರಾತ್ರಿ” ಎಂದು ಕರೆಯಲ್ಪಡುವ ಈ ದಿನ, ಭಕ್ತರು ಪೂಜೆ, ಉಪವಾಸ ಮತ್ತು ಜಾಗರಣೆಯ ಮೂಲಕ ಭಗವಾನ್ ಶಿವನಿಗೆ ಭಕ್ತಿ ಸಲ್ಲಿಸುತ್ತಾರೆ.

ಪುರಾಣಗಳ ಪ್ರಕಾರ, ಈ ದಿನವೇ ಶಿವ ಮತ್ತು ಪಾರ್ವತಿ ಅವರ ದೈವಿಕ ವಿವಾಹ ನಡೆದಿತ್ತೆಂದು ನಂಬಿಕೆ ಇದೆ. ಆದ್ದರಿಂದ ದಾಂಪತ್ಯ ಸೌಖ್ಯಕ್ಕಾಗಿ ಭಕ್ತರು ಈ ದಿನ ಪೂಜೆ ಮಾಡುತ್ತಾರೆ.
ಈ ರಾತ್ರಿ ಶಿವನು ಅನಂತ ಜ್ಯೋತಿ ರೂಪದಲ್ಲಿ ಪ್ರತ್ಯಕ್ಷನಾದ ದಿನವೆಂದು ಹೇಳಲಾಗುತ್ತದೆ. ಬ್ರಹ್ಮ ಮತ್ತು ವಿಷ್ಣು ಯಾರಿಗೆ ಶ್ರೇಷ್ಠತೆ ಎಂಬ ವಿಚಾರದಲ್ಲಿ ತರ್ಕಿಸುತ್ತಿದ್ದಾಗ ಶಿವನು ಜ್ಯೋತಿರ್ಲಿಂಗ ರೂಪದಲ್ಲಿ ಕಾಣಿಸಿಕೊಂಡರು ಎಂಬ ಕಥೆ ಇದೆ.

ಸಮುದ್ರ ಮಂಥನದ ವೇಳೆ ಹೊರಬಂದ ಹಾಲಾಹಲ ವಿಷವನ್ನು ಲೋಕಕ್ಷೇಮಕ್ಕಾಗಿ ಶಿವನು ಕುಡಿದನೆಂದು ಪುರಾಣಗಳು ಹೇಳುತ್ತವೆ. ಅದನ್ನು ತಡೆಯಲು ದೇವತೆಗಳು ರಾತ್ರಿಯಿಡೀ ಜಾಗರಣೆ ಮಾಡಿ ಪ್ರಾರ್ಥನೆ ಸಲ್ಲಿಸಿದರು.
ಮಹಾಶಿವರಾತ್ರಿ ಪೂಜೆ ಆಧ್ಯಾತ್ಮಿಕ ಶುದ್ಧತೆ, ಭಕ್ತಿ ಮತ್ತು ಶಾಂತಿಗೆ ದಾರಿ ತೆರೆಯುವ ಹಬ್ಬ. ಶುದ್ಧ ಮನಸ್ಸಿನಿಂದ ಪೂಜೆ ಮಾಡಬೇಕು .. ಶಿವ ಪೂಜೆಯಲ್ಲಿ ಬಿಲ್ವಪತ್ರೆ ಇರಲೇಬೇಕು. ಶಿವ ದೇವಾಲಯಗಳಲ್ಲಿ ಬಿಲ್ವಪತ್ರೆ ಗಿಡವನ್ನು ನೆಟ್ಟು ಬೆಳೆಸಲಾಗುತ್ತದೆ. ಈ ಬಿಲ್ವಪತ್ರೆಯನ್ನು ಶಿವನಿಗೆ ಅರ್ಪಿಸುವಾಗ ಬಿಲ್ವಾಷ್ಟಕಂ ಸ್ತೋತ್ರ ಹೇಳವ ಮೂಲಕ ಪೊಜೆ ಮಾಡಬೇಕು .

ಬಿಲ್ವಾಷ್ಟಕಂ ಶಿವನ ಆರಾಧನೆಯಲ್ಲಿ ಅತ್ಯಂತ ಪವಿತ್ರವಾದ ಸ್ತೋತ್ರವಾಗಿದೆ. ಇದು ತ್ರಿದಳ ಬಿಲ್ವಪತ್ರೆಯನ್ನು ಶಿವನಿಗೆ ಅರ್ಪಿಸುವಾಗ ಪಠಿಸುವ ಮಂತ್ರವಾಗಿದೆ. ಇದು ಜನ್ಮಜನ್ಮಾಂತರದ ಪಾಪಗಳನ್ನು ನಾಶಪಡಿಸಿ, ಲಕ್ಷ್ಮಿ ಕೃಪೆ, ಜ್ಞಾನ ಮತ್ತು ಶಿವನ ಅನುಗ್ರಹವನ್ನು ಕರುಣಿಸುತ್ತದೆ. ಬಿಲ್ವ ವೃಕ್ಷದ ದರ್ಶನ ಮತ್ತು ಸ್ಪರ್ಶವು ಪಾಪನಾಶಕ ಎಂದು ಪರಿಗಣಿಸಲಾಗಿದೆ .
