Ashwaveega News 24×7 ಫೆಬ್ರವರಿ 14 -2026 – ಹಾಸನ : ಮದುವೆ ಕಾರ್ಯಕ್ರಮಕ್ಕೆ ಆಗಮಿಸಿದ್ದ ಮಹಿಳೆಯೊಬ್ಬರು ನಿಗೂಢವಾಗಿ ನಾಪತ್ತೆಯಾಗಿರುವ ಘಟನೆ ಹಾಸನ ತಾಲೂಕಿನ ಕಲ್ಕೆರೆ ಗ್ರಾಮದಲ್ಲಿ ನಡೆದಿದೆ. ನಾಪತ್ತೆಯಾಗಿರುವ ಮಹಿಳೆಯನ್ನು ಪ್ರಿಯಾಂಕಾ ಎಂದು ಗುರುತಿಸಲಾಗಿದೆ.
ಕುಟುಂಬದ ಮಾಹಿತಿಯ ಪ್ರಕಾರ, ಪ್ರಿಯಾಂಕಾ ಮದುವೆ ಸಮಾರಂಭದ ಹಿನ್ನೆಲೆಯಲ್ಲಿ ಕಲ್ಕೆರೆ ಗ್ರಾಮಕ್ಕೆ ಬಂದಿದ್ದರು. ಸುಮಾರು 30 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ಧರಿಸಿಕೊಂಡಿದ್ದ ಅವರು, ಫೆಬ್ರವರಿ 12ರಂದು ಸಂಜೆ 7.30ರ ಸುಮಾರಿಗೆ ಕುಟುಂಬ ಸದಸ್ಯರಿಗೆ ಕರೆ ಮಾಡಿದ್ದರು. “ಪರಿಚಯದವರು ಸಿಕ್ಕಿದ್ದಾರೆ” ಎಂದು ಹೇಳಿ ಫೋನ್ ಕಟ್ ಮಾಡಿದ್ದರು.
ಆ ಬಳಿಕ ಅವರ ಮೊಬೈಲ್ ಸಂಪರ್ಕಕ್ಕೆ ಸಿಗದೆ ಇದ್ದುದರಿಂದ ಕುಟುಂಬಸ್ಥರು ಆತಂಕಗೊಂಡಿದ್ದಾರೆ. ರಾತ್ರಿ ಮನೆಗೆ ಮರಳದ ಹಿನ್ನೆಲೆಯಲ್ಲಿ ಹುಡುಕಾಟ ಆರಂಭಿಸಲಾಯಿತು.
ಇಂದು ಬೆಳಿಗ್ಗೆ ಗ್ರಾಮ ಸಮೀಪದ ಕೆರೆ ಬಳಿ ಪ್ರಿಯಾಂಕಾ ಧರಿಸಿದ್ದ ಬಟ್ಟೆ ಹಾಗೂ ಬ್ಯಾಗ್ ಪತ್ತೆಯಾಗಿದ್ದು, ಅನುಮಾನ ಮತ್ತಷ್ಟು ಗಾಢವಾಗಿದೆ. ಮಹಿಳೆ ಕೆರೆಯಲ್ಲಿ ಬಿದ್ದಿರಬಹುದೆಂಬ ಶಂಕೆಯಿಂದ ಕೆರೆಯಲ್ಲಿ ಶೋಧ ಕಾರ್ಯ ಆರಂಭಿಸಲಾಗಿದೆ.
ಹಾಸನ ತಾಲೂಕು ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ. ಶೋಧ ಕಾರ್ಯಕ್ಕೆ ಪೊಲೀಸ್ ಡ್ರೋನ್ ತಂಡವೂ ಆಗಮಿಸಿದ್ದು, ಕೆರೆಯೊಳಗೆ ಹಾಗೂ ಸುತ್ತಮುತ್ತ ಪ್ರದೇಶದಲ್ಲಿ ಪರಿಶೀಲನೆ ಮುಂದುವರಿದಿದೆ.
ಘಟನೆಯು ಗ್ರಾಮದಲ್ಲಿ ಆತಂಕ ಮೂಡಿಸಿದ್ದು, ಮಹಿಳೆಯ ಪತ್ತೆಗೆ ಪೊಲೀಸರು ವ್ಯಾಪಕ ಶೋಧ ಕಾರ್ಯ ಕೈಗೊಂಡಿದ್ದಾರೆ. ಪ್ರಕರಣದ ಕುರಿತು ತನಿಖೆ ಮುಂದುವರಿದಿದೆ.
